ದೇಶ

ಇತಿಹಾಸದಲ್ಲಿ ಇದೇ ಮೊದಲು, ಯುದ್ಧನೌಕೆಗೆ ಇಬ್ಬರು ಮಹಿಳಾ ಪೈಲಟ್ ಗಳ ನೇಮಕ

Lingaraj Badiger

ಕೊಚ್ಚಿ: ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಯುದ್ಧನೌಕೆಗೆ ಇಬ್ಬರು ಮಹಿಳಾ ಪೈಲಟ್ ಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಲಿಂಗ ಸಮಾನತೆಗೆ ದಾರಿ ಮಾಡಿಕೊಡಲಾಗಿದೆ.

ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಸೋಮವಾರ ಕೊಚ್ಚಿಯ ನೌಕಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಐಎನ್‌ಎಸ್ ಗರುಡ ಪಡೆಯನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.

ನೌಕಾಪಡೆಯ ಮಲ್ಟಿ-ರೋಲ್ ಹೆಲಿಕಾಪ್ಟರ್‌ಗಳಲ್ಲಿ ಸೋನಾರ್ ಕನ್ಸೋಲ್‌ಗಳು ಮತ್ತು ಇಂಟೆಲಿಜೆನ್ಸ್, ಕಣ್ಗಾವಲು ಮತ್ತು ಮರುಪರಿಶೀಲನೆ (ಐಎಸ್‌ಆರ್) ತರಬೇತಿ ಪಡೆಯುತ್ತಿರುವ ಈ ಇಬ್ಬರೂ ಮಹಿಳಾ ಅಧಿಕಾರಿಗಳನ್ನು ಐಎನ್‌ಎಸ್ ಗರುಡ ಹಡಗಿಗೆ ಸ್ವಾಗತ ನೀಡಲಾಯಿತು.

ಎಂಎಚ್ -60 ಆರ್ ಹೆಲಿಕಾಪ್ಟರ್‌ಗಳನ್ನು ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಈ ಹೆಲಿಕಾಪ್ಟರ್‌ಗಳಲ್ಲಿ ಈ ಇಬ್ಬರೂ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ನಿನ್ನೆಯಷ್ಟೇ ಭಾರತೀಯ ವಾಯುಸೇನೆ ತನ್ನ ರಫೇಲ್ ಯುದ್ಧ ವಿಮಾನದಲ್ಲಿ ಕಾರ್ಯ ನಿರ್ವಹಿಸಲು ಮಹಿಳಾ ಫೈಟರ್ ಪೈಲಟ್‌ವೋರ್ವರನ್ನು ನೇಮಕ ಮಾಡಿತ್ತು, ಇದರ ಬೆನ್ನಲ್ಲೇ ನೌಕಾಪಡೆ ಸಹ ತನ್ನ ಯುದ್ಧ ನೌಕೆಯಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ಮಹಿಳಾ ಅಧಿಕಾರಿಗಳನ್ನು ನೇಮಿಸಿದೆ.

SCROLL FOR NEXT