ದೇಶ

ಚೀನಾ ಹಿಂದೆ ಸರಿಯುವವರೆಗೂ ಲಡಾಖ್‌ನಲ್ಲಿ ವಶಪಡಿಸಿಕೊಂಡಿರುವ ಎತ್ತರದ ಪ್ರದೇಶಗಳಿಂದ ಹಿಂದೆ ಸರಿಯಲ್ಲ: ಭಾರತೀಯ ಸೇನೆ

Vishwanath S

ಲಡಾಖ್: ಪೂರ್ವ ಲಡಾಖ್ ಗಡಿಯಿಂದ ಚೀನಾ ಸೇನೆ ಸಂಪೂರ್ಣವಾಗಿ ಹಿಂದಕ್ಕೆ ಸರಿಯುವವರೆಗೂ ಲಡಾಖ್ ನಲ್ಲಿ ವಶಪಡಿಸಿಕೊಂಡಿರುವ ಮುಂಚೂಣಿ ನೆಲೆಗಳಿಂದ ತನ್ನ ತುಕಡಿಗಳನ್ನು ಹಿಂದಕ್ಕೆ ಕರೆಸುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. 

ಉಭಯ ದೇಶಗಳ ನಡುವೆ ಕೋರ್ ಕಮಾಂಡರ್ ಸಭೆ ನಡೆದಿದ್ದು ಅದರಲ್ಲಿ ಭಾರತೀಯ ಸೇನೆ ವಶಪಡಿಸಿಕೊಂಡಿರುವ ಉನ್ನತ ಪ್ರದೇಶಗಳಿಂದ ತನ್ನ ತುಕಡಿಗಳನ್ನು ಹಿಂಪಡೆಯಬೇಕು ಎಂದು ಚೀನಾ ಮನವಿ ಮಾಡಿತ್ತು. 

ಈ ಮನವಿಯನ್ನು ತಳ್ಳಿ ಹಾಕಿರುವ ಭಾರತೀಯ ಸೇನೆ, ಲಡಾಖ್ ಗಡಿಯಿಂದ ಸೈನ್ಯ ಹಿಂಪಡೆಯುವ ಪ್ರಕ್ರಿಯೆಯನ್ನು ಚೀನಾ ಮೊದಲು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಗಡಿಯ ಉನ್ನತ ಪ್ರದೇಶಗಳಿಂದ ತನ್ನ ಸೇನೆಯನ್ನು ಹಿಂದಕ್ಕೆ ಸರಿಸುವ ಪ್ರಶ್ನೆ ಇಲ್ಲ ಎಂದು ಸೈನ್ಯಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಕೋರ್ ಕಮಾಂಡರ್ ಸಭೆಯಲ್ಲಿ ಗಡಿಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯವನ್ನು ನಿಯೋಜಿಸುವುದಿಲ್ಲ ಎಂಬ ಪ್ರಸ್ತಾವನೆಗೆ ಎರಡೂ ಬಣಗಳು ಸಹಮತಿ ಸೂಚಿಸಿದ್ದವು. ಹೀಗಾಗಿ ಅಂದಿನಿಂದ ಎರಡೂ ಸೇನೆಗಳು ಹೆಚ್ಚಿನ ಸೈನಿಕರನ್ನು ಗಡಿಯಲ್ಲಿ ನಿಯೋಜಿಸುತ್ತಿಲ್ಲ. 

ಇನ್ನು ಏಳನೇ ಸುತ್ತಿನ ಕೋರ್ ಕಮಾಂಡರ್ ಸಭೆಗೆ ಉಭಯ ಸೇನೆ ಒಪ್ಪಿಗೆ ನೀಡಿದ್ದು ಅದರಂತೆ ಶ್ರೀಘ್ರದಲ್ಲೇ ಭಾರತ-ಚೀನಾ ಉನ್ನತ ಸೈನ್ಯಾಧಿಕಾರಿಗಳು ಮತ್ತೆ ಸಭೆ ಸೇರಲಿದ್ದಾರೆ. 

SCROLL FOR NEXT