ದೇಶ

ಪಂಜಾಬ್: ಕೃಷಿ ಮಸೂದೆ ವಿರೋಧಿಸಿ ಮೂರು ದಿನಗಳ ರೈಲು ತಡೆ ಪ್ರತಿಭಟನೆ ಆರಂಭ, ರೈಲು ಸಂಚಾರ ಸೇವೆ ಸ್ಥಗಿತ

Sumana Upadhyaya

ಚಂಡೀಗಢ: ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ಪಂಜಾಬ್ ರಾಜ್ಯದಲ್ಲಿ ರೈತರು ಮೂರು ದಿನಗಳ ರೈಲು ತಡೆ ಪ್ರತಿಭಟನೆಯನ್ನು ಗುರುವಾರ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಫೆರೋಜ್ ಪುರ್ ರೈಲ್ವೆ ವಿಭಾಗ ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಇಂದಿನಿಂದ ನಾಡಿದ್ದು 26ರವರೆಗೆ 14 ಜೊತೆ ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆ ಆಸ್ತಿಪಾಸ್ತಿಗಳು ಯಾವುದೇ ರೀತಿಯಲ್ಲಿ ಹಾನಿಗೀಡಾಗಬಾರದು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಸ್ಥಗಿತಗೊಂಡ ರೈಲುಗಳು: ಗೋಲ್ಡನ್ ಟೆಂಪಲ್ ಮೈಲ್(ಅಮೃತ್ ಸರ-ಮುಂಬೈ ಸೆಂಟ್ರಲ್), ಜನ ಶತಾಬ್ದಿ ಎಕ್ಸ್ ಪ್ರೆಸ್(ಹರಿದ್ವಾರ-ಅಮೃತಸರ), ನವದೆಹಲಿ-ಜಮ್ಮು ತವಿ, ಕರಮ್ ಬೂಮಿ(ಅಮೃತಸರ- ನ್ಯೂ ಜಲ್ಪೈಗುರಿ), ಸಚ್ ಖಂಡ್ ಎಕ್ಸ್ ಪ್ರೆಸ್(ನಂಡೆಡ್ ಅಮೃತಸರ) ಮತ್ತು ಶಾಹೀದ್ ಎಕ್ಸ್ ಪ್ರೆಸ್ ಆಗಿವೆ.

ಸದ್ಯ ಕೋವಿಡ್-19ನಿಂದಾಗಿ ಸಾಮಾನ್ಯ ರೈಲುಗಳ ಸೇವೆ ಸ್ಥಗಿತಗೊಂಡಿವೆ. ರೈಲ್ ರೊಕೊ ಪ್ರತಿಭಟನೆಗೆ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಕರೆ ನೀಡಿದ್ದು, ಅದಕ್ಕೆ ವಿವಿಧ ರೈತ ಸಂಘಟನೆಗಳು ತಮ್ಮ ಬೆಂಬಲ ಸೂಚಿಸಿವೆ.

ರಾಜ್ಯಸಭೆಯಲ್ಲಿ ಅಗತ್ಯ ವಸ್ತುಗಳು(ತಿದ್ದುಪಡಿ) ಮಸೂದೆ, 2020, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರ(ಸಶಕ್ತೀಕರಣ ಮತ್ತು ರಕ್ಷಣೆ)ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆಯ ಒಪ್ಪಂದ,2020 ಮಸೂದೆಗಳು ಅನುಮೋದನೆಗೊಂಡಿವೆ.

SCROLL FOR NEXT