ದೇಶ

ಗುರುತಿನ ಪುರಾವೆಗೆ ಒತ್ತಾಯಿಸದೆ, ಲೈಂಗಿಕ ಕಾರ್ಯಕರ್ತೆಯರಿಗೆ ಒಣ ಪಡಿತರ ಪೂರೈಸಿ: ರಾಜ್ಯಗಳಿಗೆ 'ಸುಪ್ರೀಂ' ನಿರ್ದೇಶನ

Nagaraja AB

ನವದೆಹಲಿ: ರಾಷ್ಟ್ರೀಯ ಏಡ್ಡ್ಸ್ ನಿಯಂತ್ರಣ ಸಂಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರಿಗಳಿಂದ ಗುರುತಿಸಲ್ಪಟ್ಟ ಲೈಂಗಿಕ ಕಾರ್ಯಕರ್ತೆಯರಿಗೆ ಗುರುತಿನ ಪುರಾವೆಗೆ ಒತ್ತಾಯಿಸದೆ ಒಣ ಪಡಿತರವನ್ನು ಪೂರೈಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಈ ಅವಧಿಯಲ್ಲಿ ಒಣ ಪಡಿತರವನ್ನು ವಿತರಿಸಿದ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆಯ ವಿವರದ ಬಗ್ಗೆ ಅನುಸರಣಾ ವರದಿಯೊಂದನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಉನ್ನತ ನ್ಯಾಯಾಲಯ ಸೂಚಿಸಿದೆ.

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಹಣಕಾಸಿನ ನೆರವು ನೀಡಬಹುದೇ ಎಂಬ ಅಂಶದ ಬಗ್ಗೆ ನಂತರ ಕೋರ್ಟ್ ವ್ಯವಹರಿಸಲಿದೆ ಎಂದು ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್ ಮತ್ತು ಅಜಯ್ ರಾಸ್ಟೋಗಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.ಈ ವಿಷಯದ ಬಗ್ಗೆ ವಿಚಾರಣೆಯನ್ನು ನಾಲ್ಕು ವಾರಗಳ ನಂತರ ನಡೆಸಲು ನ್ಯಾಯಾಲಯ ಮುಂದೂಡಿತು.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗೆಗ್ಗಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ,  ಲೈಂಗಿಕ ಕಾರ್ಯಕರ್ತೆಯರಿಗೆ ಯಾವ ರೀತಿಯಲ್ಲಿ ಗುರುತಿನ ಕಾರ್ಡ್ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಗಿದೆ ಎಂಬುದರ ಬಗ್ಗೆ ಸಮಗ್ರ ವಿವರನ್ನು ಸಲ್ಲಿಸುವಂತೆ ನ್ಯಾಯಾಲಯಗಳಿಗೆ ಸೂಚಿಸಿತು.

ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿದ ಅರ್ಜಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ಆನಂದ್ ಗ್ರೋವರ್, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡುು ಮತ್ತು ತೆಲಂಗಾಣದಲ್ಲಿ ಸರ್ವೇಯೊಂದರ ಪ್ರಕಾರ 1.2 ಲಕ್ಷ ಲೈಂಗಿಕ ಕಾರ್ಯಕರ್ತರಿದ್ದು, ಸಾಂಕ್ರಾಮಿಕ ಕಾಯಿಲೆಯಿಂದಾಗಿ ಶೇ. 96 ರಷ್ಟು ಮಂದಿ ಆದಾಯದ ಮೂಲವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಲೈಂಗಿಕ ಕಾರ್ಯಕರ್ತರು ಎದುರಿಸುತ್ತಿರುವ ದುಸ್ಥಿತಿ ಕುರಿತು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ದರ್ಬಾರ್ ಮಹಿಳಾ ಸಮನ್ವಯ ಸಮಿತಿ, ದೇಶಾದ್ಯಂತ ಇರುವ 9 ಲಕ್ಷ ಮಹಿಳೆಯರು ಮತ್ತು ತೃತೀಯ ಲಿಂಗಿಯ ಲೈಂಗಿಕ ಕಾರ್ಯಕರ್ತರಿಗೆ ಪರಿಹಾರವನ್ನು ಬಯಸಿದೆ.

SCROLL FOR NEXT