ಬೆಂಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ವಿಮಾನದಲ್ಲಿಯೇ ಬೆತ್ತಲಾಗಿ, ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ಇತ್ತೀಚಿಗೆ ಬೆಂಗಳೂರಿನಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ನಡೆದಿದೆ.
ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನ ಸಿಬ್ಬಂದಿ ಜತೆ ಅಸಭ್ಯ ವರ್ತಿಸಿ, ಬೆತ್ತಲೆಯಾಗಿದ್ದ ವ್ಯಕ್ತಿಯ ವಿರುದ್ಧ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಏಪ್ರಿಲ್ 6 ರಂದು i5-722 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಅಂದು ಬೆಳಗಿನ ಜಾವ 12.46ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಬೆಳಗ್ಗೆ 3.21ಕ್ಕೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತು.
"ಮೊದಲನೆಯದಾಗಿ, ಅಶಿಸ್ತಿನ ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಲೈಫ್ ಜಾಕೆಟ್ ಗೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆಸಿದರು. ನಂತರ ಅವರು ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ಇದ್ದಕ್ಕಿದ್ದಂತೆ ತಮ್ಮ ಎಲ್ಲಾ ಬಟ್ಟೆಗಳನ್ನು ಬಿಚ್ಚಿದರು". ಆದರೆ ಸಹ ಪ್ರಯಾಣಿಕರ ಸಹಾಯದಿಂದ ಅವರನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ವಿಮಾನದಲ್ಲಿದ್ದ ಪ್ರಯಾಣಿಕರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಏರ್ ಏಷ್ಯಾ ಇಂಡಿಯಾ ವಕ್ತಾರರು ಈ ಘಟನೆಯನ್ನು ಖಚಿತಪಡಿಸಿದ್ದು, "ಏಪ್ರಿಲ್ 6 ರಂದು ಬೆಂಗಳೂರಿನಿಂದ ನವದೆಹಲಿಗೆ ಆಗಮಿಸಿದ ಐ5-722 ವಿಮಾನದ ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದರು. ವಿಮಾನ ದೆಹಲಿಗೆ ಆಗಮಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.