ದೇಶ

ಪಶ್ಚಿಮ ಬಂಗಾಳ: ಚುನಾವಣಾ ಪ್ರಚಾರಕ್ಕೆ 24 ಗಂಟೆ ನಿಷೇಧ, ಮಂಗಳವಾರ ಮಮತಾ ಬ್ಯಾನರ್ಜಿ ಧರಣಿ

Nagaraja AB

ಕೊಲ್ಕತ್ತಾ: ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಕೇಂದ್ರಿಯ ಪಡೆ- ಸಿಆರ್ ಪಿಎಫ್ ವಿರುದ್ಧ ಹೇಳಿಕೆ ಆರೋಪದ ಮೇರೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 24 ಗಂಟೆಗಳ ಕಾಲ ಯಾವುದೇ ರೀತಿಯ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.

ಏಪ್ರಿಲ್ 12ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 13ರ ರಾತ್ರಿ 8 ಗಂಟೆಯವರೆಗೆ ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರಕ್ಕೆ  ನಿರ್ಬಂಧ ವಿಧಿಸಿ ಆಯೋಗ ಆದೇಶ ಹೊರಡಿಸಿದೆ. 

ಚುನಾವಣಾ ಆಯೋಗದಿಂದ ಈ ಆದೇಶ ಹೊರಬೀಳುತ್ತಿದ್ದಂತೆ, ಚುನಾವಣಾ ಸಮಿತಿ ಬಿಜೆಪಿಯ ಘಟಕದಂತೆ ವರ್ತಿಸುತ್ತಿದಂತೆ ಎಂದು ಟಿಎಂಸಿ ಆರೋಪಿಸಿದೆ. ದೇಶದ ಪ್ರಜಾಪ್ರಭುತ್ವಕ್ಕೆ ಇದು ಕಪ್ಪು ದಿನವಾಗಿದೆ ಎಂದು ರಾಜ್ಯಸಭಾ ಸದಸ್ಯ ಡೆರೆಕ್ ಓ ಬ್ರಿಯಾನ್ ಹೇಳಿದ್ದಾರೆ.

ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗದ ಈ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಮಮತಾ ಬ್ಯಾನರ್ಜಿ, ಆಯೋಗದ ನಿರ್ಣಯ ಪ್ರಜಾಪ್ರಭುತ್ವ ವಿರೋಧಿ, ಅಸಂವಿಧಾನಿಕವಾಗಿದೆ. ಆಯೋಗದ ನಿರ್ಧಾರ ಖಂಡಿಸಿ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ  ಕೋಲ್ಕತ್ತಾದ ಗಾಂಧಿ ಪ್ರತಿಮೆ ಬಳಿ ಧರಣಿ ಕೂರುವುದಾಗಿ ಟ್ಪಿಟರ್ ನಲ್ಲಿ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಮಾರ್ಚ್ 27 ರಿಂದ ಮತದಾನ ಆರಂಭವಾಗಿದ್ದು, ಎಂಟು ಹಂತಗಳ ಮತದಾನದ ಪೈಕಿ ಈಗಾಗಲೇ ನಾಲ್ಕು ಹಂತಗಳು ಮುಕ್ತಾಯಗೊಂಡಿವೆ.

SCROLL FOR NEXT