ದೇಶ

''ನಿಜಾಮುದ್ದೀನ್ ಮರ್ಕಜ್ ಗೂ ಕುಂಭಮೇಳಕ್ಕೂ ಹೋಲಿಕೆ ಸಾಧ್ಯವಿಲ್ಲ'; ಗಂಗಾ ನದಿಯಲ್ಲಿ ಮಿಂದರೆ ಕೊರೋನಾ ಬರಲ್ಲ"!

Srinivas Rao BV

ಡೆಹ್ರಾಡೂನ್: ದೇಶಾದ್ಯಂತ ಕೊರೋನಾ ಎರಡನೇ ಅಲೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹರಡುತ್ತಿದ್ದು, ಕಳೆದ ವರ್ಷ ಕೊರೋನಾ ತೀವ್ರಗೊಳ್ಳಲು ಕಾರಣವಾಗಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಗೂ ಈ ವರ್ಷ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಹೋಲಿಕೆ ಮಾಡಲಾಗುತ್ತಿದೆ. 

ಈ ಬಗ್ಗೆ ಉತ್ತರಾಖಂಡ್ ನ ಸಿಎಂ ತೀರ್ಥ ಸಿಂಗ್ ರಾವತ್  ಪ್ರತಿಕ್ರಿಯೆ ನೀಡಿದ್ದು, ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಮರ್ಕಜ್ ಗೂ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಯಾವುದೇ ರೀತಿಯಲ್ಲಿ ಹೋಲಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

"ನಿಜಾಮುದ್ದೀನ್ ಮರ್ಕಜ್ ತೆರೆದ ಪ್ರದೇಶದಲ್ಲಿ ನಡೆಯದೇ ಹಾಲ್ ನಲ್ಲಿ ನಡೆದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೇ ಹಾಲ್ ನಲ್ಲಿದ್ದುಕೊಂಡು ಬ್ಲಾಂಕೆಟ್ ಮುಂತಾದವುಗಳನ್ನು ಹಂಚಿಕೊಂಡಿದ್ದರು.  ಆದರೆ ಇದಕ್ಕೆ ತದ್ವಿರುದ್ಧವಾಗಿ ಕುಂಭ ಮೇಳ ಬೃಹತ್ ವಿಶಾಲ ತೆರೆದ ಪ್ರದೇಶದಲ್ಲಿ ನಡೆಯುತ್ತಿದ್ದು 16 ಘಾಟ್ ಗಳಿವೆ. ಕುಂಭ ಮೇಳ ಹರಿದ್ವಾರಕ್ಕೆ ಮಾತ್ರವಲ್ಲದೇ ಹೃಷಿಕೇಶ, ನೀಲಕಂಠ ಎಂಬ ಪ್ರದೇಶಗಳಿಗೂ ವಿಸ್ತರಿಸಿದೆ. ಭಕ್ತಾದಿಗಳು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಘಾಟ್ ಗಳಲ್ಲಿ ಸ್ನಾನ ಮಾಡುತ್ತಾರೆ. 
 
ಅಖಾಡಗಳಿಗೆ ಸಂಬಂಧಿಸಿದವರೂ ಸಹ ಬೇರೆ ಬೇರೆ ಸಮಯಗಳಲ್ಲಿ ಘಾಟ್ ಗಳಿಗೆ ಬರುತ್ತಾರೆ. ಅಖಾಡಾದ ಮುಖ್ಯಸ್ಥರು ನಿರ್ದಿಷ್ಟ ಸಮಯದಲ್ಲಿ ಭೇಟಿ ನೀಡುತ್ತಾರೆ. ಪ್ರಮುಖವಾಗಿ ಕುಂಭ ಮೇಳ ನಡೆಯುತ್ತಿರುವ ಹರಿಯುವ ನೀರಿನ ದಡದಲ್ಲಿ. ಹರಿಯುವ ನೀರಿನಲ್ಲಿ ಗಂಗಾ ಮಾತೆಯ ಆಶೀರ್ವಾದವಿರುತ್ತದೆ, ಅಲ್ಲಿ ಕೊರೋನಾ ಇರಬಾರದು ಎಂದು ಸಿಎಂ ತೀರ್ಥ್ ಸಿಂಗ್ ರಾವತ್ ಹೇಳಿದ್ದಾರೆ. 

2020 ರಲ್ಲಿ ಕೊರೋನಾ ಪ್ರಾರಂಭವಾದಾಗ, ಸುನ್ನಿ ಇಸ್ಲಾಮಿಕ್ ಮಿಷನರಿ ಚಳುವಳಿಯ ತಬ್ಲಿಘಿ ಜಮಾತ್ ನ ಕೇಂದ್ರ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರಿಂದ ಕೋವಿಡ್-19 ಪ್ರಸರಣ ಹೆಚ್ಚಳದ ಭೀತಿ ಉಂಟಾಗಿತ್ತು. ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳವನ್ನು ಹಲವು ಮಂದಿ ಕಳೆದ ಬಾರಿಯ ನಿಜಾಮುದ್ದೀನ್ ಮರ್ಕಜ್, ತಬ್ಲಿಘಿ ಜಮಾತ್ ನ ಕಾರ್ಯಕ್ರಮಕ್ಕೆ ಹೋಲಿಕೆ ಮಾಡುತ್ತಿದ್ದಾರೆ. 

ಸಾಮಾನ್ಯವಾಗಿ ಕುಂಭ ಮೇಳ 4 ತಿಂಗಳು ನಡೆಯುತ್ತದೆ. ಆದರೆ ಈ ಬಾರಿ ಕೋವಿಡ್-19 ಭೀತಿ ಇರುವುದರಿಂದ ಇದನ್ನು ಒಂದು ತಿಂಗಳಿಗೆ ಮೊಟಕುಗೊಳಿಸಿ ಏ.30 ಕ್ಕೆ ಮುಕ್ತಾಯಗೊಳಿಸಲಾಗುತ್ತಿದೆ. 

SCROLL FOR NEXT