ದೇಶ

ಉತ್ತರ ಪ್ರದೇಶ ಸರ್ಕಾರ ಕೊರೋನಾ ವೈರಸ್ ಸಂಖ್ಯೆಯನ್ನು ಮರೆಮಾಚುತ್ತಿದೆ: ಪ್ರಿಯಾಂಕಾ ಆರೋಪ

Nagaraja AB

ಲಖನೌ: ಉತ್ತರ ಪ್ರದೇಶ ಸರ್ಕಾರ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ. ಸರ್ಕಾರ ಮೊದಲಿನಿಂದಲೂ ಜಾಗ್ರತೆ ವಹಿಸಿದ್ದರೆ ಜನರು ಇಂತಹ ಪರಿಸ್ಥಿತಿಯನ್ನು ನೋಡಬೇಕಾಗಿರಲಿಲ್ಲ ಎಂದಿದ್ದಾರೆ. 

ಉತ್ತರ ಪ್ರದೇಶದ ಪಕ್ಷದ ಮುಖಂಡರೊಂದಿಗೆ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ, ಸರ್ಕಾರ ನಿರಂತರವಾಗಿ ಕೋವಿಡ್-19 ಸೋಂಕಿನ ಸಂಖ್ಯೆ ಹಾಗೂ ಸಾವಿನ ಪ್ರಮಾಣವನ್ನು ಮರೆಮಾಚುತ್ತಿದೆ. ಕೊರೋನಾವೈರಸ್ ಪರಿಸ್ಥಿತಿಯನ್ನು ನಿರ್ವಹಿಸುವ  ಯಾವುದೇ ವ್ಯವಸ್ಥೆ, ಯೋಜನೆಯನ್ನು ಸರ್ಕಾರ ಹೊಂದಿಲ್ಲ. ಸೋಂಕು ಹರಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.  ಆಸ್ಪತ್ರೆಗಳಲ್ಲಿ ಪರೀಕ್ಷೆ ನಡೆಯುತ್ತಿಲ್ಲ ಎಂಬುದು ರಾಜ್ಯ ಸಚಿವ ಬ್ರಿಜೇಶ್ ಪಾಠಕ್ ಅವರ ಪತ್ರದಿಂದ ಸ್ಪಷ್ಟವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

ಏಪ್ರಿಲ್ 5 ಮತ್ತು 11ರ ನಡುವೆ ದೇಶದಲ್ಲಿ ಶೇ.70 ರಷ್ಟು ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗಿದ್ದರೆ, ಉತ್ತರ ಪ್ರದೇಶದಲ್ಲಿ ಶೇ.281 ರಷ್ಟು ಹೆಚ್ಚಾಗಿದೆ. 24 ಕೋಟಿ ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ 1 ಕೋಟಿ ಜನರಿಗೂ ಲಸಿಕೆ ನೀಡಿಲ್ಲ.  ಲಖನೌದಲ್ಲಿ ಸಾಲು ಸಾಲು ಮೃತದೇಹಗಳನ್ನು ನೋಡಬಹುದು. ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಗಳಲ್ಲಿ ಮರಗಳ ಕೊರತೆ ಉಂಟಾಗಿದೆ ಎಂದು ಅವರು ಹೇಳಿದರು. 

SCROLL FOR NEXT