ದೇಶ

ಕೋವಿಡ್-19: ಆಸ್ಪತ್ರೆಗಳಿಗೆ ರೆಮ್ಡೆಸಿವಿರ್, ಆಕ್ಸಿಜನ್ ಸಿಲಿಂಡರ್ ಪೂರೈಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ರಾಜ್ಯಗಳ ಮನವಿ

Lingaraj Badiger

ನವದೆಹಲಿ: ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳು ಹಾಗೂ ರೆಮ್ಡೆಸಿವಿರ್ ಪೂರೈಕೆ ಹೆಚ್ಚಿಸುವುದು, ವೆಂಟಿಲೇಟರ್ ದಾಸ್ತಾನು ಮತ್ತು ಲಸಿಕೆ ಪ್ರಮಾಣವನ್ನು ಹೆಚ್ಚಿಸುವಂತೆ 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶನಿವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ನೇತೃತ್ವದಲ್ಲಿ 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳ ಆರೋಗ್ಯ ಸಚಿವರು ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ 11 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಆಕ್ಸಿಜನ್ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಬೇಕು, ಆಸ್ಪತ್ರೆಗಳಲ್ಲಿ ರೆಮ್‌ಡೆಸಿವಿರ್ ಪೂರೈಕೆಯನ್ನು ಹೆಚ್ಚಿಸಬೇಕು, ವೆಂಟಿಲೇಟರ್ ದಾಸ್ತಾನು ಮತ್ತು ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೇಳಿಕೊಂಡಿರುವುದಾಗಿ ಸಭೆಯ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕೊರೋನಾ ಸೋಂಕು ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿದ್ದು , ಕಳೆದ 24 ಗಂಟೆಯಲ್ಲಿ 2,ಲಕ್ಷದ 34,692ಹೊಸ ಪ್ರಕರಣ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 2,34,692 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,526,609ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸೋಂಕಿಗೆ 1,341 ಜನರು ಮೃತಪಟ್ಟಿದ್ದಾರೆ.

SCROLL FOR NEXT