ದೇಶ

ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ ಮೂವರು ಉದ್ಯೋಗಿಗಳ ಅಪಹರಣ

Srinivasamurthy VN

ಶಿವಸಾಗರ: ಅಸ್ಸಾಂನ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಸಂಸ್ಥೆಯ ತೈಲ ಸಂಸ್ಕರಣಾ ಘಟಕದ ಮೂವರು ಸಿಬ್ಬಂದಿಗಳು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಸ್ಸಾಂ ಶಿವಸಾಗರ ಜಿಲ್ಲೆಯ ಲಖ್ವಾದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ತೈಲ ಸಂಸ್ಕರಣಾ ಘಟಕದ ಇಬ್ಬರು ಸಹಾಯಕ ಜೂನಿಯರ್ ಇಂಜಿನಿಯರ್‌ಗಳು ಮತ್ತು ಓರ್ವ ಜೂನಿಯರ್ ಟೆಕ್ನಿಷಿಯನ್​ನ್ನು ಅಪಹರಿಸಿದ್ದಾರೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಿಸಲಾಗಿದೆ.  ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇನ್ನು ತನ್ನ ಸಿಬ್ಬಂದಿಗಳ ಅಪಹರಣದ ಕುರಿತು ಒಎನ್ ಜಿಸಿ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಇಂದು ಬೆಳಗಿನ ಜಾವ ಶಿವಸಾಗರ ಜಿಲ್ಲೆಯ ಲಖ್ವಾ ಒಎನ್ ಜಿಸಿ ಘಟಕದಲ್ಲಿ ಮೂವರು ಸಿಬ್ಬಂದಿಗಳನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ.  ಅಪಹರಣಕ್ಕೊಳಗಾದ ನೌಕರರನ್ನು ಒಎನ್‌ಜಿಸಿಗೆ ಸೇರಿದ ಕಾರ್ಯಾಚರಣಾ ವಾಹನದಲ್ಲಿಯೇ ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ನಂತರ, ಅಸ್ಸಾಂ-ನಾಗಾಲ್ಯಾಂಡ್ ಗಡಿಯ ಸಮೀಪವಿರುವ ನಿಮೋನಗಢ ಅರಣ್ಯದ ಬಳಿ ವಾಹನವನ್ನು ಬಿಟ್ಟು ಸಿಬ್ಬಂದಿಗಳೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಟ್ವೀಟ್ ಮಾಡಿದೆ.

ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಅಸ್ಸಾಂ ರಾಜ್ಯ ಪೊಲೀಸರ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಮತ್ತು ಒಎನ್‌ಜಿಸಿ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT