ದೇಶ

ಮೊದಲನೇ ಅಲೆಯಷ್ಟೇ ತೀವ್ರತೆ, ಜನಸಂಖ್ಯೆಯನ್ನು ಕೊರೋನಾ ಎರಡನೇ ಅಲೆ ಬಾಧಿಸಿದೆ: ಆರೋಗ್ಯ ಸಚಿವಾಲಯ

Srinivas Rao BV

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್-19 ನ ಎರಡು ಅಲೆಗಳ ಬಗ್ಗೆ ತುಲನಾತ್ಮಕ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಅಲೆಯ ತೀವ್ರತೆ, ಅದರಿಂದ ಬಾಧಿತರಾಗುತ್ತಿರುವ ಜನಸಂಖ್ಯೆ ಮೊದಲನೆ ಅಲೆಯಂತೆಯೇ ಇದೆ ಎಂದು ಹೇಳಿದೆ. 

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, 146 ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕು ಪ್ರಮಾಣ ಶೇ.15 ಕ್ಕಿಂತ ಹೆಚ್ಚಿದ್ದರೆ, 274 ಜಿಲ್ಲೆಗಳಲ್ಲಿ ಶೇ.5-15 ರಷ್ಟಿದೆ ಎಂದು ಹೇಳಿದ್ದಾರೆ. ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ಭೀತಿ ಮೂಡಿಸುತ್ತಿರುವ ನಡುವೆ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಅಂಕಿ-ಅಂಶಗಳ ಪ್ರಕಾರ, 10 ಕ್ಕಿಂತ ಕಡಿಮೆ ವಯಸ್ಸಿನ ಮಂದಿಯಲ್ಲಿ ಶೇ.4.03 ರಷ್ಟು ಕೋವಿಡ್-19 ಸೋಂಕು ತಗುಲಿತ್ತು. ಎರಡನೇ ಅಲೆಯಲ್ಲಿ ಈ ಪ್ರಮಾಣ 2.97 ರಷ್ಟು ದಾಖಲಾಗಿದೆ. 

10-20 ವಯಸ್ಸಿನವರಲ್ಲಿ ಶೇ.8.07 ರಷ್ಟು ಕೋವಿಡ್-19 ಪ್ರಕರಣಗಳು ಮೊದಲ ಅಲೆಯಲ್ಲಿ ವರದಿಯಾಗಿದ್ದರೆ, ಎರಡನೇ ಅಲೆಯಲ್ಲಿ ಇದೇ ವಯಸ್ಸಿನವರಲ್ಲಿ ಶೇ.8.50 ರಷ್ಟು ಪ್ರಕರಣಗಳು ವರದಿಯಾಗಿವೆ. 20-30 ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇ.20.41 ರಷ್ಟು ಸೋಂಕು ಪ್ರಕರಣ ವರದಿಯಾಗಿದ್ದರೆ ಈಗ 19.35 ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ. 

30 ಹಾಗೂ ಮೇಲ್ಪಟ್ಟ ವಯಸ್ಸಿನವರ ಪೈಕಿ ಶೇ.67.5 ರಷ್ಟು ಮಂದಿಗೆ ಕೋವಿಡ್-19 ಸೋಂಕು ಮೊದಲ ಅಲೆಯಲ್ಲಿ ಪತ್ತೆಯಾಗಿತ್ತು. ಈಗ ಎರಡನೇ ಅಲೆಯಲ್ಲಿ ಇದು ಶೇ.69.18 ರಷ್ಟಕ್ಕೆ ಏರಿಕೆಯಾಗಿದೆ. 

SCROLL FOR NEXT