ದೇಶ

ದೆಹಲಿಗೆ ಆಕ್ಸಿಜನ್ ಹಂಚಿಕೆಯಾಗಿರುವುದನ್ನು ಕೆಲವು ರಾಜ್ಯಗಳು ಗೌರವಿಸುತ್ತಿಲ್ಲ: ಹೈಕೋರ್ಟ್

Srinivas Rao BV

ನವದೆಹಲಿ: ಕೇಂದ್ರ ಸರ್ಕಾರ ದೆಹಲಿಗೆ ಹರ್ಯಾಣ ಸೇರಿದಂತೆ ವಿವಿಧಡೆಗಳ ಘಟಕಗಳಿಂದ ಮಾಡಿರುವ ಆಕ್ಸಿಜನ್ ಹಂಚಿಕೆಯನ್ನು ಕೆಲವು ರಾಜ್ಯಗಳು ಗೌರವಿಸುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಹೇಳಿದೆ. 

ಹರ್ಯಾಣದ ಪಾಣಿಪತ್ ನಿಂದ ದೆಹಲಿಗೆ ಬರಬೇಕಾದ ಆಕ್ಸಿಜನ್ ನ್ನು ಪೊಲೀಸರು ತಡೆದಿದ್ದಾರೆ ಎಂದು ದೆಹಲಿ ಸರ್ಕಾರ, ನ್ಯಾ.ವಿಪಿನ್ ಸಂಘಿ ಹಾಗೂ ನ್ಯಾ.ರೇಖಾ ಪಳ್ಳಿ ಅವರಿದ್ದ ಪೀಠದೆದುರು ಹೇಳಿತ್ತು. ಇದಷ್ಟೇ ಅಲ್ಲದೇ ಉತ್ತರ ಪ್ರದೇಶದಿಂದ ತರಬೇಕಿದ್ದ ಕೆಲವು ಆಕ್ಸಿಜನ್ ಘಟಕಗಳನ್ನೂ ಇದೇ ಕಾರಣಕ್ಕೆ ತರಲಾಗಲಿಲ್ಲ ಎಂದು ಕೋರ್ಟ್ ಗೆ ದೆಹಲಿ ಸರ್ಕಾರ ತಿಳಿಸಿದೆ. 

ದೆಹಲಿ ಸರ್ಕಾರದ ಆತಂಕಗಳ ಬಗ್ಗೆ ಮಾಹಿತಿ, ನಿರ್ದೇಶನಗಳನ್ನು ಪಡೆಯುವುದಾಗಿ ಸಾಲಿಸಿಟರ್ ಜನರ (ಎಸ್ ಜಿ) ತುಷಾರ್ ಮೆಹ್ತಾ ಕೋರ್ಟ್ ಗೆ ಇದೇ ವೇಳೆ ತಿಳಿಸಿದ್ದಾರೆ. ಎಸ್ ಜಿ ಹೇಳಿಕೆಯ ನಂತರ, ದೆಹಲಿ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. 

ಇದೇ ವಿಷಯವಾಗಿ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಮಾತನಾಡಿದ್ದು, "ದೆಹಲಿಗೆ ಲಭ್ಯವಾಗಬೇಕಿರುವ ಆಕ್ಸಿಜನ್ ಟ್ಯಾಂಕ್ ಗಳನ್ನು ಸಿಗದಂತೆ ಉತ್ತರ ಪ್ರದೇಶ ಹಾಗೂ ಹರ್ಯಾಣ ಪೊಲೀಸರು ತಡೆಹಿಡಿದಿದ್ದಾರೆ, ಅರೆಸೇನಾ ಪಡೆಗಳ ಸಹಾಯ ಪಡೆದಾದರೂ ಸರಿಯೇ ತಮಗೆ ಆಕ್ಸಿಜನ್ ಪೂರೈಕೆಯನ್ನು ಸುಗಮಗೊಳಿಸಬೇಕು" ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
 
ಆಕ್ಸಿಜನ್ ಪೂರೈಕೆ ತಡೆಯುತ್ತಿರುವ ಜಂಗಲ್ ರಾಜ್ ಕೃತ್ಯಗಳು ಮೂರುದಿನಗಳಿಂದ ನಡೆಯುತ್ತಿದೆ. ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ಸಂಪೂರ್ಣವಾಗಿ ಕುಸಿದಿದೆ. ಈ ರೀತೀ ದೀರ್ಘಾವಧಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.

SCROLL FOR NEXT