ದೇಶ

ಕೋವಿಡ್-19 ಲಸಿಕೆ ತೀವ್ರ ಅನಾರೋಗ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ: ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ

Sumana Upadhyaya

ನವದೆಹಲಿ: ಕೋವಿಡ್-19 ಲಸಿಕೆಗಳು ಕೊರೋನಾ ಸೋಂಕಿನಿಂದ ಜನರನ್ನು ಸಂಪೂರ್ಣವಾಗಿ ರಕ್ಷಿಸದಿದ್ದರೂ ಕೂಡ ಸೋಂಕಿಗೆ ತುತ್ತಾದವರನ್ನು ತೀವ್ರ ಅನಾರೋಗ್ಯಕ್ಕೀಡಾಗದಂತೆ ಕಾಪಾಡುತ್ತದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ ರಂದೀಪ್ ಗುಲೆರಿಯಾ ತಿಳಿಸಿದ್ದಾರೆ.

ಬೆಂಗಳೂರಿನ ನಾರಾಯಣ ಆರೋಗ್ಯ ಕೇಂದ್ರದ ಅಧ್ಯಕ್ಷ ಡಾ ದೇವಿ ಶೆಟ್ಟಿ ಮತ್ತು ಮೇದಾಂತ ಅಧ್ಯಕ್ಷ ಡಾ ನರೇಶ್ ಟ್ರೆಹಾನ್ ಅವರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಲಸಿಕೆ ಹಾಕಿಸಿಕೊಂಡಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಅದು ಸೋಂಕು ಹೆಚ್ಚಾಗದಂತೆ ತಡೆಯುತ್ತದೆ. ಇದರಿಂದ ಕೊರೋನಾದಿಂದ ಸಾವಿನ ಸಂಖ್ಯೆಯನ್ನು ತಗ್ಗಿಸಬಹುದು ಎಂದಿದ್ದಾರೆ.

ಕೊರೋನಾಗೆ ಲಸಿಕೆ ಏಕೆ ಎಂದು ಬಹಳಷ್ಟು ಜನರು ಕೇಳುತ್ತಾರೆ, ಲಸಿಕೆ ನೀವು ಸೋಂಕಿಗೆ ಒಳಗಾಗುವುದನ್ನು ತಡೆಯದಿರಬಹುದು, ಲಸಿಕೆ ಪಡೆದ ವ್ಯಕ್ತಿಗೆ ಎರಡು ವಾರ ಕಳೆದ ನಂತರವೂ ಸೋಂಕು ಬರುವ ಸಾಧ್ಯತೆಯಿದೆ, ಆದರೆ ಸೋಂಕಿಗೆ ತುತ್ತಾದ ನಂತರ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಸೇರುವುದು, ಐಸಿಯು ಬೆಡ್ ಅನಿವಾರ್ಯತೆ, ಆಕ್ಸಿಜನ್ ಅಗತ್ಯವನ್ನು ತಡೆಯುತ್ತದೆ, ಕೊರೋನಾದಿಂದ ಸಾಯುವುದನ್ನು ಕೂಡ ಲಸಿಕೆ ತಡೆಯುತ್ತದೆ ಎಂದಿದ್ದಾರೆ.

ಬಹುಪಾಲು ಜನರಲ್ಲಿ ಕೊರೋನಾ ಲಸಿಕೆ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಿದೆ. ಕೋವಿಡ್ ಸೋಂಕಿತ ವ್ಯಕ್ತಿಯ ಹತ್ತಿರ ನಿಂತಾಗ ವೈರಸ್ ನಿಮ್ಮ ಮೂಗು, ಗಂಟಲು ಸೇರಬಹುದು. ನಂತರ ನಿಮ್ಮ ದೇಹದೊಳಗೆ ದ್ವಿಗುಣಗೊಳ್ಳಬಹುದು. ಆದರೆ ಲಸಿಕೆ ವೈರಸ್ ಮತ್ತಷ್ಟು ದೇಹದೊಳಗೆ ಬೆಳೆಯದಂತೆ ತಡೆಯುತ್ತದೆ, ವೈರಸ್ ನ ತೀವ್ರತೆಯನ್ನು ದೇಹದಲ್ಲಿ ಕಡಿಮೆ ಮಾಡಿ ನಿಮ್ಮ ಜೀವವನ್ನು ಕಾಪಾಡುತ್ತದೆ, ಈ ಸಮಯದಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬರಬಹುದು, ನಿಮ್ಮಿಂದ ಬೇರೆಯವರಿಗೂ ಸೋಂಕು ತಗುಲಬಹುದು ಎಂದು ವಿವರಿಸಿದ್ದಾರೆ.

ಹೊರಗೆ ಓಡಾಡುವಾಗ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಿ ಕೋವಿಡ್-19 ನಿಯಮವನ್ನು ಸರಿಯಾಗಿ ಪಾಲಿಸಿಕೊಳ್ಳಿ, ಕೊರೋನಾ ಲಸಿಕೆ ವೈರಸ್ ವಿರುದ್ಧ ಹೋರಾಡಲು ಪ್ರಮುಖವಾದ ಅಸ್ತ್ರ ಎಂದು ಡಾ ಗುಲೇರಿಯಾ ಹೇಳಿದ್ದಾರೆ.

SCROLL FOR NEXT