ದೇಶ

ಕೋವಿಡ್-19: ಅಮಿಕಸ್ ಕ್ಯೂರಿಯಾಗಲ್ಲ ಎಂದ ಸಾಳ್ವೆ ಮನವಿಗೆ ಕೋರ್ಟ್ ಸಮ್ಮತಿ: ಆದೇಶ ಸರಿಯಾಗಿ ಓದದ ಲಾಯರ್ ಗಳಿಗೆ ತರಾಟೆ 

Srinivas Rao BV

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ಆಕ್ಸಿಜನ್, ಜೀವ ರಕ್ಷಕ ವೈದ್ಯಕೀಯ ಸಂಪನ್ಮೂಲಗಳ ಪೂರೈಕೆ ವ್ಯತ್ಯಯವಾಗಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದಲ್ಲಿ ತಾವು ಅಮಿಕಸ್ ಕ್ಯೂರಿಯಾಗುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಹರೀಶ್ ಸಾಳ್ವೆ ತಿಳಿಸಿದ್ದಾರೆ. ಹರೀಶ್ ಸಾಳ್ವೆ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. 

ದೇಶಾದ್ಯಂತ ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗಿದ್ದು, ರಾಜ್ಯಗಳಲ್ಲಿ ಆಕ್ಸಿಜನ್, ಔಷಧಗಳ ಪೂರೈಕೆ ವ್ಯತ್ಯಯವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿತ್ತು. ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹರೀಶ್ ಸಾಳ್ವೆ ನೇಮಕಗೊಂಡಿದ್ದರು. ಆದರೆ ಹರೀಶ್ ಸಾಳ್ವೆ ಅವರ ನೇಮಕಾತಿಗೆ ಸಂಬಂಧಿಸಿದಂತೆ ಇತರ ಹಿರಿಯ ವಕೀಲರಿಂದ ಆಕ್ಷೇಪ ವ್ಯಕ್ತವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರಿದ್ದ ಪೀಠ,  ಕೋರ್ಟ್ ನ ಆದೇಶವನ್ನು ಸರಿಯಾಗಿ ಓದದೇ ಹಿರಿಯ ವಕೀಲರು ಹೇಳಿಕೆ ನೀಡುತ್ತಿರುವುದು ನೋವುಂಟುಮಾಡಿದೆ ಎಂದು ಹೇಳಿದೆ. 

ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್ ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಗಳು ವಿಚಾರಣೆ ನಡೆಸುವುದಕ್ಕೆ ತಡೆ ಹಾಕಿಲ್ಲ ಎಂದು ಹೇಳಿದೆ. ಇದೇ ವೇಳೆ ಪ್ರತಿಕ್ರಿಯೆ ಸಲ್ಲಿಸಲು ಸುಪ್ರೀಂ ಕೋರ್ಟ್ ಏ.27 ವರೆಗೆ ಕೇಂದ್ರಕ್ಕೆ ಸಮಯ ನೀಡಿದೆ. 

ಇನ್ನು ಹರೀಶ್ ಸಾಳ್ವೆ ಈ ವಿಷಯವನ್ನು ಸೂಕ್ಷ್ಮ ವಿಷಯ ಎಂದು ಹೇಳಿದ್ದು, ನೂತನ ನ್ಯಾ. ಎನ್.ವಿ. ರಮಣ ಅವರನ್ನು ತಾವು ಶಾಲೆ, ಕಾಲೇಜು ದಿನಗಳಿಂದ ಬಲ್ಲವರಾಗಿರುವ ಸಿಜೆಐ ನ ನೆರಳಿನ ಅಡಿಯಲ್ಲಿ ಈ ಪ್ರಕರಣ ಇತ್ಯರ್ಥವಾಗುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿದ್ದಕ್ಕೆ ವ್ಯಕ್ತವಾಗುತ್ತಿರುವ ಆಕ್ಷೇಪವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒತ್ತಡದ ತಂತ್ರ ಎಂದು ಹೇಳಿದ್ದು, ಇಂತಹ ಒತ್ತಡದ ತಂತ್ರಗಳಿಗೆ ಬಲಿಯಾಗಬಾರದೆಂದು ಹರೀಶ್ ಸಾಳ್ವೆ ಅವರಲ್ಲಿ ಮನವಿ ಮಾಡಿದ್ದಾರೆ. 

SCROLL FOR NEXT