ದೇಶ

ಜಮ್ಮು- ಕಾಶ್ಮೀರ ಗಡಿಯೊಳಗೆ ಪ್ರವೇಶಿಸಿದ್ದ ಪಾಕ್ ಡ್ರೋನ್‌ಗಳನ್ನು ಗುಂಡು ಹಾರಿಸಿ  ಹಿಮ್ಮೆಟ್ಟಿಸಿದ ಬಿಎಸ್ಎಫ್!

Nagaraja AB

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಅರ್ನಿಯಾ ವಲಯದಲ್ಲಿ ಪಾಕ್ ಪಡೆಗಳ ಡ್ರೋನ್ ಒಳನುಗ್ಗುವ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಬಿಎಸ್ಎಫ್ ವಕ್ತಾರರು ಶನಿವಾರ ಹೇಳಿದ್ದಾರೆ.

ಇಂದು ಮುಂಜಾನೆ ಪಾಕಿಸ್ತಾನದ ಕಡೆಯಿಂದ ಎರಡು ಡ್ರೋನ್ ಗಳು ಪ್ರವೇಶಿಸಿವೆ. ಕೂಡಲೇ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಿಯೋಜಿಸಿದ್ದ ಬಿಎಸ್ ಎಫ್ ಯೋಧರು ಗುಂಡು ಹಾರಿಸಿದ್ದು, ಡ್ರೋನ್ ಗಳು, ಯುಎವಿಗಳು ಪಾಕಿಸ್ತಾನದ ಕಡೆಗೆ ಹೋಗುವಂತೆ ಹಿಮ್ಮೆಟ್ಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಕದನ ವಿರಾಮ ಒಪ್ಪಂದದ ಅಸ್ತಿತ್ವದ ಹೊರತಾಗಿಯೂ ಪಾಕಿಸ್ತಾನ ರೇಂಜರ್ಸ್ ಗಳು ಭಾರತದ ವಿರುದ್ಧ ತಮ್ಮ ದುಷ್ಕೃತ್ಯಗಳನ್ನು ನಿಲ್ಲಿಸಿಲ್ಲ  ಎಂದು ಅವರು ತಿಳಿಸಿದ್ದಾರೆ.

ಪಾಕ್ ಡ್ರೋನ್ ಗಳು ದೇಶದೊಳಗೆ ನುಸುಳದಂತೆ ಕ್ಷಿಪ್ರಗತಿಯಲ್ಲಿ ಬಿಎಸ್ ಎಫ್ ನಿಂದ ಪ್ರತಿಕ್ರಿಯೆ ನೀಡಲಾಗಿದೆ. ಭಾರತದೊಳಗೆ ಶಸಾಸ್ತ್ರಗಳು, ಮದ್ದು ಗುಂಡುಗಳನ್ನು ಸಾಗಿಸಲು ಪಾಕಿಸ್ತಾನ ಡ್ರೋನ್ ಗಳನ್ನು ಬಳಸುತ್ತಿದೆ ಎಂದು ಬಿಎಸ್ ಎಫ್ ಗುಪ್ತಚರ ವಿಭಾಗ ಮಾಹಿತಿ ಪಡೆದಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ರೇಂಜರ್ಸ್ ಗಳು ನಿರಂತರವಾಗಿ ಗಡಿ ನಿಯಮ ಉಲ್ಲಂಘಿಸಿ ಡ್ರೋನ್ ಗಳನ್ನು ಒಳ ನುಸುಳುವಿಕೆ ಮತ್ತು ಶಸಾಸ್ತ್ರಗಳು, ಮದ್ದು ಗುಂಡುಗಳನ್ನು ಭಾರತದೊಳಗೆ ಸಾಗಿಸುವ ಪ್ರಯತ್ನವನ್ನು ಮಾಡುತ್ತಿದೆ.ಆದಾಗ್ಯೂ ಈ ಬಾರಿ ಬಿಎಸ್ ಎಫ್ ಪಡೆಯಿಂದ ಯಶಸ್ವಿಯಾಗಿ ಪ್ರತಿಕ್ರಿಯೆ ನೀಡಲಾಗಿದೆ ಎಂದು ಅವರು ಮಾಹಿತಿ  ನೀಡಿದ್ದಾರೆ.

SCROLL FOR NEXT