ಮುಂಬೈನಲ್ಲಿ 3 ವಾರಗಳ ಬಳಿಕ ಮೊದಲ ಬಾರಿಗೆ ಕನಿಷ್ಠ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ!
ಕೊರೋನಾ ಹಾಟ್ ಸ್ಪಾಟ್ ಆಗಿ ಕಳೆದ ಮೂರು ದಿನಗಳಿಂದ ಗರಿಷ್ಠ ಪ್ರಮಾಣದಲ್ಲಿ ಹೊಸ ಸೋಂಕಿತರು ದಾಖಲಾಗುತ್ತಿದ್ದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗಿದೆ.
ಮುಂಬೈ: ಕೊರೋನಾ ಹಾಟ್ ಸ್ಪಾಟ್ ಆಗಿ ಕಳೆದ ಮೂರು ದಿನಗಳಿಂದ ಗರಿಷ್ಠ ಪ್ರಮಾಣದಲ್ಲಿ ಹೊಸ ಸೋಂಕಿತರು ದಾಖಲಾಗುತ್ತಿದ್ದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗಿದೆ.
ಹೌದು.. ನಿನ್ನೆ ಮುಂಬೈನಲ್ಲಿ 5,888 ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ಮೂರು ವಾರಗಳಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಸೋಂಕಿನ ಪ್ರಮಾಣ ಎನ್ನಲಾಗಿದೆ. ಮುಂಬೈನಲ್ಲಿ ಬುಧವಾರ 7,684 ಸೋಂಕು ಪ್ರಕರಣಗಳು ವರದಿಯಾಗಿದ್ದರೆ, ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ 7,410 ಮತ್ತು 7,221 ಸೋಂಕು ಪ್ರಕರಣಗಳು ವರದಿಯಾಗಿತ್ತು.
ಕಳೆದ ಕೆಲ ವಾರಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಕಠಿಣ ನಿರ್ಬಂಧಗಳು ಮತ್ತು ಸ್ಥಳೀಯ ಲಾಕ್ ಡೌನ್ ಹೇರಲಾಗಿದೆ. ಆದರೆ ಕೋವಿಡ್ ಸೋಂಕಿನಿಂದ ಉಂಟಾಗುತ್ತಿರುವ ಸಾವುಗಳ ಪ್ರಮಾಣ ಮಾತ್ರ ಬಹುತೇಕ ಅಷ್ಟೇ ಇದ್ದು, ನಿನ್ನೆ ಕೂಡ ಮುಂಬೈನಲ್ಲಿ 71 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಗುರುವಾರ 75 ಮಂದಿ ಸೋಂಕಿತರು ಸಾವನ್ನಪ್ಪಿದ್ದರೆ, ಶುಕ್ರವಾರ 72 ಮಂದಿ ಸೋಂಕಿತರು ಸಾವನ್ನಪ್ಪಿದ್ದರು ಎಂದು ಬಿಎಂಸಿ ಮಾಹಿತಿ ನೀಡಿದೆ.
ಶನಿವಾರ ದಾಖಲಾದ 5,888 ಹೊಸ ಸೋಂಕು ಪ್ರಕರಣಗಳೊಂದಿಗೆ ಮುಂಬೈನ ಒಟ್ಟಾರೆ ಸೋಂಕಿತರ ಸಂಖ್ಯೆ 6,22,109ಕ್ಕೆ ಏರಿಕೆಯಾಗಿದ್ದು, 71 ಮಂದಿ ಸೋಂಕಿತರ ಸಾವಿನೊಂದಿಗೆ ಕೋವಿಡ್ 19 ಒಟ್ಟಾರೆ ಸಾವಿನ ಸಂಖ್ಯೆ 8,549ಕ್ಕೆ ಏರಿಕೆಯಾಗಿದೆ. ನಿನ್ನೆ ಮುಂಬೈನಲ್ಲಿ 8549 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 529233ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಮುಂಬೈನಲ್ಲಿ 78 775 ಸಕ್ರಿಯ ಪ್ರಕರಣಗಳಿವೆ.
ಮಹಾರಾಷ್ಟ್ರದಲ್ಲಿ ಮತ್ತೆ 65 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿ
ಇನ್ನು ಮಹಾರಾಷ್ಟ್ರದಾದ್ಯಂತ ಕೋವಿಡ್ ಅಬ್ಬರ ಮುಂದುವರೆದಿದ್ದು, ಶನಿವಾರ ಕೂಡ ಮಹಾರಾಷ್ಟ್ರದಲ್ಲಿ ಮತ್ತೆ 65 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಶನಿವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 67,160 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 42,28,836ಕ್ಕೆ ಏರಿಕೆಯಾಗಿದೆ. ಅಂತೆಯೇ ನಿನ್ನೆ 676 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೋವಿಡ್ ಸಾವಿನ ಸಂಖ್ಯೆ 63928ಕ್ಕೆ ಏರಿಕೆಯಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲಿ 63,818 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 34,68,610ಕ್ಕೆ ಏರಿಕೆಯಾಗಿದೆ. ಇನ್ನು ಪ್ರಸ್ತುತ ಮಹಾರಾಷ್ಟ್ರದಲ್ಲಿ 6,94,480 ಸಕ್ರಿಯ ಪ್ರಕರಣಗಳಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.