ದೇಶ

ನ್ಯಾ. ಎಂ.ಎಂ.ಶಾಂತನಗೌಡರ್ ನಿಧನಕ್ಕೆ ಸುಪ್ರೀಂ ಕೋರ್ಟ್ ಸಹೋದ್ಯೋಗಿಗಳಿಂದ ಮೌನಾಚರಣೆ: ದಿನದ ನ್ಯಾಯಾಂಗ ಕಲಾಪ ರದ್ದು 

Sumana Upadhyaya

ನವದೆಹಲಿ: ಕರ್ನಾಟಕ ಮೂಲದ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ಎಂ.ಎಂ.ಶಾಂತನಗೌಡರ್ ಅವರ ನಿಧನಕ್ಕೆ ಸಿಬ್ಬಂದಿ ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಿ ದಿನದ ನ್ಯಾಯಾಂಗ ಕಲಾಪವನ್ನು ರದ್ದುಪಡಿಸಲಾಗಿದೆ.

ಇಂದು ಬೆಳಗ್ಗೆ ನ್ಯಾಯಾಂಗ ಕಲಾಪ ಆರಂಭ ಸಮಯಕ್ಕೆ ಸೇರಿದ ನ್ಯಾಯಾಧೀಶರು ಅಗಲಿದ ನ್ಯಾ.ಎಂ.ಎಂ.ಶಾಂತನಗೌಡರ್ ಅವರಿಗೆ ಗೌರವ ಶ್ರದ್ಧಾಂಜಲಿಯಾಗಿ ಎರಡು ನಿಮಿಷ ಮೌನಾಚರಣೆ ಮಾಡಿದರು. ನಂತರ ಇಂದಿನ ದಿನದ ನ್ಯಾಯಾಂಗ ಕಲಾಪವನ್ನು ರದ್ದುಪಡಿಸಲಾಯಿತು.

62 ವರ್ಷ ನ್ಯಾ.ಎಂ.ಎಂ.ಶಾಂತನಗೌಡರ್ ನಿನ್ನೆ ಗುರುಗಾಂವ್ ನ ಮೇದಾಂತ್ ಖಾಸಗಿ ಆಸ್ಪತ್ರೆಯಲ್ಲಿ ಶ್ವಾಸಕೋಶದ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಹೊಸದಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ನ್ಯಾ.ಎನ್ ವಿ ರಮಣ ಅವರು ಸಂತಾಪ ಸಭೆಯ ನೇತೃತ್ವವನ್ನು ಕೋರ್ಟ್ ಆವರಣದಲ್ಲಿ ವಹಿಸಿದ್ದರು, ಅವರಿಗೆ ಇತರ ಏಳು ಮಂದಿ ನ್ಯಾಯಾಧೀಶರು ಸಾಥ್ ಕೊಟ್ಟರು.

ಅಗಲಿದ ಚೇತನಕ್ಕೆ ಗೌರವ ಸೂಚಕವಾಗಿ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಗುವುದು ಎಂದು ಘೋಷಿಸಿದ ಮುಖ್ಯ ನ್ಯಾಯಮೂರ್ತಿ ರಮಣ ಅವರು, ನ್ಯಾ.ಶಾಂತನಗೌಡರ್ ಅವರ ಹಠಾತ್ ನಿಧನ ತಮ್ಮೆಲ್ಲರನ್ನು ದುಃಖಕ್ಕೀಡುಮಾಡಿದೆ ಎಂದರು.

ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಯು.ಯು.ಲಲಿತ್, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್, ಆರ್ ರವೀಂದ್ರ ಭಟ್ ಮತ್ತು ಹೃಷಿಕೇಶ್ ರಾಯ್ ಸಂತಾಪ ಸೂಚಕ ಸಭೆಯಲ್ಲಿ ಭಾಗಿಯಾಗಿದ್ದರು.

ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ಮತ್ತು ವಕೀಲ ಶಿವಾಜಿ ಜಾಧವ್ ಅವರು ಸಂತಾಪ ಸೂಚಕ ಸಭೆಗೆ ವರ್ಚುವಲ್ ಮೂಲಕ ಹಾಜರಾದರು.

ನ್ಯಾ.ಶಾಂತನಗೌಡರ್ 2017ರ ಫೆಬ್ರವರಿ 17ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು. ಅವರ ಸೇವಾ ಅವಧಿ 2023ರ ಮೇ 5ರವರೆಗೆ ಇತ್ತು.

ಜಸ್ಟೀಸ್ ಮೋಹನ್ ಎಂ.ಶಾಂತನಗೌಡರ್ ನಿಧನ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ, ಧಾರವಾಡ ಸೇರಿದಂತೆ ಎಲ್ಲಾ ಜಿಲ್ಲೆಗಳು ತ್ತು ತ್ವರಿತ ನ್ಯಾಯಾಲಯಗಳ ಇಂದಿನ ನ್ಯಾಯಾಂಗ ಕಲಾಪವನ್ನು ರದ್ದುಪಡಿಸಲಾಗುವುದು ಎಂದು ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ. 

SCROLL FOR NEXT