ದೇಶ

ಒಎನ್ ಜಿಸಿ ಉದ್ಯೋಗಿಗಳ ಅಪಹರಣ ಪ್ರಕರಣ: ಪೊಲೀಸ್ ಪೇದೆ ಸೇರಿ ಮೂವರ ಬಂಧನ

Srinivas Rao BV

ಗುವಾಹಟಿ: ಅಸ್ಸಾಂ ನಲ್ಲಿ ಒಎನ್ ಜಿಸಿ ಉದ್ಯೋಗಿಗಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಸೇರಿ ಮೂವರನ್ನು ಬಂಧಿಸಲಾಗಿದೆ.

ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೊರೇಷನ್ (ಒಎನ್ ಜಿಸಿ)ಯ ಮೂವರು ಉದ್ಯೋಗಿಗಳನ್ನು ಉಲ್ಫಾ ಉಗ್ರರು ಅಪಹರಣ ಮಾಡಿದ್ದರು. ಶಿವಸಾಗರ್ ಜಿಲ್ಲೆಯಲ್ಲಿ ಒಎನ್ ಜಿಸಿಯ ವರ್ಕ್ ಓವರ್ ರಿಗ್ ಕಾಮಗಾರಿಯ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. 

ಬಂಧಿತ ಪೇದೆಯನ್ನು ಒಎನ್ ಜಿಸಿ ಬೆಟಾಲಿಯನ್ ನ 25ನೇ ಎಪಿಯ ಬಸಂತ್ ಬುರಗೋಹೈನ್ ಎಂದು ಗುರುತಿಸಲಾಗಿದೆ.

ಇನ್ನಿಬ್ಬರನ್ನು ದಿಬ್ರುಘರ್ ಜಿಲ್ಲೆಯ ಬಿರಾಜ್ ಚೇತಿಯಾ ಹಾಗೂ ಶಿವಸಾಗರ್ ಜಿಲ್ಲೆಯ ರಾಹುಲ್ ಮೋಹನ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಶಾಮೀಲಾಗಿದ್ದ ಇನ್ನಿಬ್ಬರು ಪೊಲೀಸರು ತಲೆಮರೆಸಿಕೊಂಡಿದ್ದಾರೆ. ಈ ಮೂವರೂ ಒಎನ್ ಜಿಸಿ ಕಾಮಗಾರಿ ಸ್ಥಳದಲ್ಲೇ ನಿಯೋಜಿಸಲ್ಪಟ್ಟಿದ್ದರು.

ಘಟನೆಗೆ ಸಂಬಂಧಿಸಿದಂತೆ ಶಾಮೀಲಾಗಿರುವ ಯಾರನ್ನೂ ಪೊಲೀಸರು ಬಿಡುವುದಿಲ್ಲ ಎಂದು ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ ಹೇಳಿದ್ದಾರೆ. ಕಳೆದ ಬುಧವಾರ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದಲೇ ಮೂವರು ಉದ್ಯೋಗಿಗಳನ್ನು ಉಲ್ಫಾ ಉಗ್ರರು ಅಪಹರಣ ಮಾಡಿದ್ದರು.ಈ ಪೈಕಿ ಕಿರಿಯ ಇಂಜಿನಿಯರಿಂಗ್ ಸಹಾಯಕ ಅಲಕೇಶ್ ಸೈಕಿಯಾ ಹಾಗೂ ಕಿರಿಯ ತಂತ್ರಜ್ಞ ಮೋಹಿನಿ ಮೋಹನ್ ಗೊಗೋಯ್ ಅವರನ್ನು ಭದ್ರತಾ ಪಡೆಗಳು ರಕ್ಷಿಸಿದ್ದವು. ಆದರೆ ಅಪಹರಣಕ್ಕೊಳಗಾದ ಮೂರನೇ ಉದ್ಯೋಗಿಯ ಬಗ್ಗೆ ಈ ವರೆಗೂ ಸುಳಿವು ದೊರೆತಿಲ್ಲ. ಉಲ್ಫಾ ಉಗ್ರರಿಗಾಗಿ ಭದ್ರತಾ ಪಡೆಗಳು ಶೋಧಕಾರ್ಯ ಮುಂದುವರೆಸಿವೆ.

SCROLL FOR NEXT