ದೇಶ

ಕೋವಿಡ್-19 ಉಲ್ಬಣ; ಶ್ರೀಲಂಕಾದಲ್ಲಿ ನಿರ್ಬಂಧ ಉಲ್ಲಂಘಿಸಿದ ಹಿಂದೂ ದೇಗುಲದ ಅಧಿಕಾರಿಗಳ ಬಂಧನ

Srinivasamurthy VN

ಕೊಲಂಬೊ: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ನಿರ್ಬಂಧನೆಗಳನ್ನು ಉಲ್ಲಂಘಿಸಿ ದೊಡ್ಡ ಮಟ್ಟದ ಪ್ರಾರ್ಥನಾ ಕೂಟ ನಡೆಸಿದ ಆರೋಪದ ಮೇರೆಗೆ ಶ್ರೀಲಂಕಾದಲ್ಲಿ ಹಿಂದೂ ದೇಗುಲದ ಅಧಿಕಾರಿಗಳನ್ನು ಬಂಧಿಸಲಾಗಿದೆ.

ತಮಿಳು ಪ್ರಾಬಲ್ಯದ ಜಾಫ್ನಾದ ಶ್ರೀ ಕಾಮಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮತ್ತು ಮಾಸ್ಕ್ ಗಳನ್ನು ಧರಿಸದೆ ಅಪಾರ ಜನರು ಪಾಲ್ಗೊಂಡಿದ್ದರು. ಇದೇ ಕಾರಣಕ್ಕಾಗಿ ದೇಗುಲದ ಉನ್ನತಾಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ.  

ನಿಷೇಧದ ಹೊರತಾಗಿಯೂ ಈ ಕಾರ್ಯಕ್ರಮವನ್ನು ನಡೆಸಿದ್ದಕ್ಕಾಗಿ ದೇವಾಲಯದ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಂಕಾದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಲಂಕಾ ಸರ್ಕಾರ 3ನೇ ಹಂತದ ನಿರ್ಬಂಧನೆಗಳನ್ನು ಹೇರಿದೆ. ಅದರಂತೆ ಮೇ 31ರವರೆಗೂ ದೊಡ್ಡ ಮಟ್ಟದ ಜನಸಮೂಹ ಸೇರುವುದನ್ನು ನಿಷೇಧಿಸಿದೆ. ಅಲ್ಲದೆ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದ್ದು, ರಾಜಕೀಯ ಪ್ರಚಾರ,  ಸಾರ್ವಜನಿಕ ಕೂಟಗಳನ್ನು ನಿಷೇಧಿಸಿದೆ. ಅಲ್ಲದೆ ನೂತನ ಮಾರ್ಗಸೂಚಿಗಳ ಅನ್ವಯ ಕ್ಯಾಸಿನೊಗಳು, ರಾತ್ರಿ ಕ್ಲಬ್‌ಗಳು ಮತ್ತು ಬೀಚ್ ಪಾರ್ಟಿಗಳನ್ನು ಸಹ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ತಿಳಿಸಲಾಗಿದ್ದು, ಇತರರಿಗೆ  ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ.  

ಇನ್ನು ಲಂಕಾದಲ್ಲಿ ಮಂಗಳವಾರ 1,111  ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. 

SCROLL FOR NEXT