ದೇಶ

ಟೋಕಿಯೊ ಒಲಂಪಿಕ್ಸ್: ಚಿನ್ನದ ಅಥ್ಲೀಟ್ ನೀರಜ್ ಗೆ 6 ಕೋಟಿ, ಕಂಚು ಗೆದ್ದ ಪುನಿಯಾಗೆ 2.5 ಕೋಟಿ ರೂ. ಘೋಷಣೆ

Srinivasamurthy VN

ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ಪದಕಗಳನ್ನು ಗೆದ್ದ ಭಾರತದ ಅಥ್ಲೀಟ್ ಗಳಾದ  ನೀರಜ್ ಚೋಪ್ರಾ ಹಾಗೂ ಬಜರಂಗ್ ಪುನಿಯಾ ಅವರಿಗೆ ಹರ್ಯಾಣ ಸರ್ಕಾರ ನಗದು ಬಹುಮಾನ ಘೋಷಣೆ ಮಾಡಿದೆ.

ಈ ಕುರಿತಂತೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಮಾಹಿತಿ ನೀಡಿದ್ದು, ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಕೋಟಿ ರೂ ನಗದು ಹಾಗೂ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಬಜರಂಗ್ ಪುನಿಯಾ ಅವರಿಗೆ 2.5 ಕೋಟಿ ರೂ ನಗದು ಬಹುಮಾನ ಘೋಷಣೆ ಮಾಡಿದೆ.

ಇನ್ನು ಇಂದು ನಡೆದ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಜಾಕೂಬ್ ವಾಡ್ಲೆಜ್ಚ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆದ್ದರು. ಗೆಲ್ಲಲು 23 ವರ್ಷದ ನೀರಾಜ್ 87.58 ಮೀಟರ್ ಎಸೆತವನ್ನು ಎಸೆದು ಇತಿಹಾಸ ಸೃಷ್ಟಿಸಿದರು. ಈ ಪದಕ, ಹಾಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದ್ದು, ಈ ಹಿಂದೆ 2008 ರ ಬೀಜಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದ ನಂತರ ಒಲಿಂಪಿಕ್ ಇತಿಹಾಸದಲ್ಲಿ ದೇಶಕ್ಕೆ ಸಿಕ್ಕ ಎರಡನೇ ವೈಯಕ್ತಿಕ ಚಿನ್ನದ ಪದಕವಾಗಿದೆ.

ಕುಸ್ತಿಪಟು ಬಜರಂಗ್ ಪುನಿಯಾಗೆ ಸರ್ಕಾರಿ ಉದ್ಯೋಗ, ನಿವೇಶನ
ಇದೇ ವೇಳೆ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ಬಜರಂಗ್ ಪುನಿಯಾ, 65 ಕೆಜಿ ವಿಭಾಗದ ಫ್ರೀಸ್ಟೈಲ್ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ8-0 ಅಂತರದ ಭರ್ಜರಿ ಗೆಲುವು ಸಾಧಿಸಿದರು. ಆ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ. ಹೀಗಾಗಿ ಬಜರಂಗ್ ಪುನಿಯಾಗೆ ಹರ್ಯಾಣ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ನಗದು ಬಹುಮಾನದ ಜೊತೆಗೇ ಸರ್ಕಾರಿ ಉದ್ಯೋಗ, ಶೇ.50ರಷ್ಟು ರಿಯಾಯಿತಿ ದರದಲ್ಲಿ ನಿವೇಶನ ನೀಡುವುದಾಗಿ ಸಿಎಂ ಮನೋಹರ್ ಲಾಲ್ ಖಟ್ಟರ್ ಘೋಷಣೆ ಮಾಡಿದ್ದಾರೆ.

SCROLL FOR NEXT