ದೇಶ

ವಂದನಾ ಕಟಾರಿಯಾ ಕುಟುಂಬಸ್ಥರಿಗೆ ಜಾತಿ ನಿಂದನೆ ಪ್ರಕರಣ: ಮತ್ತೋರ್ವ ವ್ಯಕ್ತಿಯ ಬಂಧನ

Nagaraja AB

ಹರಿದ್ವಾರ: ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅವರ ಕುಟುಂಬಸ್ಥರಿಗೆ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದಂತಾಗಿದೆ.

ಶನಿವಾರ 22 ವರ್ಷದ  ಸುಮಿತ್ ಚೌವ್ಹಾಣ್ ಎಂಬುವರನ್ನು ಬಂಧಿಸಲಾಗಿದೆ ಎಂದು ಹರಿದ್ವಾರ ಎಸ್ ಎಸ್ ಪಿ ಸೆಂಥಿಲ್ ಅವೊದಾಯಿ ಕೃಷ್ಣ ರಾಜ್ ಎಸ್ ತಿಳಿಸಿದ್ದಾರೆ.  ಆತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೂ ಮೂವರನ್ನು ಬಂಧಿಸಲಾಗಿದೆ. ಈ ಹಿಂದೆ ವಿಜಯ್ ಪಾಲ್ ಹಾಗೂ ಆತನ ಸಹೋದರ್ ಅಂಕೂರ್ ಪಾಲ್ ಎಂಬವರನ್ನು ಬಂಧಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 504(  ಶಾಂತಿಯನ್ನು ಹದಗೆಡಿಸಲು ಉದ್ದೇಶಪೂರ್ವಕವಾಗಿ ಅಪಮಾನ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತರು ಒಲಂಪಿಕ್ಸ್ ಸೆಮಿಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಭಾರತೀಯ ಮಹಿಳಾ ತಂಡ ಸೋತ ನಂತರ ವಂದನಾ ಮನೆಯ ಮುಂದೆ ಪಟಾಕಿ ಸಿಡಿಸಿ, ಅವಹೇಳನಕಾರಿ ಮಾತುಗಳನ್ನಾಡಿದ್ದರು. ಅಲ್ಲದೇ, ಹೆಚ್ಚಿನ ಸಂಖ್ಯೆಯ ದಲಿತ ಆಟಗಾರ್ತಿಯರು ಹಾಕಿ ತಂಡದಲ್ಲಿದ್ದರಿಂದ ಸೋಲಿಗೆ ಕಾರಣವಾಯಿತು ಎಂದು ಹೇಳುವ ಮೂಲಕ ಅವರ ಕುಟುಂಬಸ್ಥರನ್ನು ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.

ಈ ಮಧ್ಯೆ ರೊಸ್ನಾಬಾದ್  ಪ್ರದೇಶದಲ್ಲಿರುವ ವಂದನಾ ಕಟಾರಿಯಾ ಕುಟುಂಬಸ್ಥರ ಮನೆಯ ಮುಂದೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ವಂದನಾ ಕಟಾರಿಯಾ ಅವರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ 25 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. 

SCROLL FOR NEXT