ದೇಶ

ಪ್ರತಿಪಕ್ಷಗಳ ಗದ್ದಲದ ನಡುವೆ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರ

Lingaraj Badiger

ನವದೆಹಲಿ: ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ರಾಜ್ಯಗಳಿಗೆ ತಮ್ಮದೇ ಆದ ಒಬಿಸಿ ಪಟ್ಟಿಗಳನ್ನು ಮಾಡುವ ಅಧಿಕಾರ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. 

ಇಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಅವರು ಸಂವಿಧಾನ (ನೂರ ಇಪ್ಪತ್ತೇಳನೇ ತಿದ್ದುಪಡಿ) ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. 

ಈ ಮಧ್ಯೆ ವಿರೋಧ ಪಕ್ಷಗಳು ಪೆಗಾಸಸ್ ಗೂಢಚರ್ಯೆ ವಿವಾದ, ಕೃಷಿ ಕಾನೂನುಗಳು ಮತ್ತು ಇತರ ವಿಷಯಗಳ ಮೇಲೆ ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ತಿದ್ದುಪಡಿಯಿಂದ ರಾಜ್ಯಳಿಗೆ ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ನೋಟಿಫೈ ಮಾಡುವ ಅಧಿಕಾರ ಮರಳಿ ಸಿಗಲಿದೆ. ಈ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸಿ 2021 ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 

2018ರಲ್ಲಿ ರಚಿಸಲಾಗಿದ್ದ ಕಾನೂನು ಪ್ರಕಾರ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ. ಪಟ್ಟಿಯಲ್ಲಿ ತಮ್ಮ ರಾಜ್ಯಕ್ಕೆ ಬದಲಾವಣೆ ಅಗತ್ಯ ಇದ್ದಲ್ಲಿ ಆಯಾ ರಾಜ್ಯ ಸರ್ಕಾರಗಳು ಕೇಂದ್ರದ ಬಳಿ ಮನವಿ ಮಾಡಿಕೊಳ್ಳಬಹುದಷ್ಟೇ. ಮರಾಠ ಸಮುದಾಯದ ಮೀಸಲಾತಿ ವಿಚಾರ ಇದೇ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಬಂದಾಗ ಈ ಕಾನೂನು ಪ್ರಮುಖ ತೊಡಕಾಗಿ ಕಂಡಿತ್ತು. ಈ ಹಿನ್ನೆಲೆಯಲ್ಲಿ ಈ ಕಾನೂನಿಗೆ ಈಗ ತಿದ್ದುಪಡಿ ತರಲಾಗಿದೆ. ಅದರಂತೆ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಓಬಿಸಿ ಪಟ್ಟಿ ತಯಾರಿಸುವ ಅಧಿಕಾರ ಹೊಂದಿರುತ್ತವೆ. 

"ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಹಿಂದುಳಿದ ವರ್ಗಕ್ಕೆ ಸೇರಿದ್ದಾಗಿದೆ. ಮಸೂದೆ ಮಂಡನೆ ಮಾಡಿದ ದಿನವೇ ಅಂಗೀಕರಿಸಲಾಗುತ್ತದೆ" ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜನ್ ಖರ್ಗೆ ಅವರು ಇದಕ್ಕು ಮುನ್ನ ಹೇಳಿದ್ದರು.

SCROLL FOR NEXT