ದೇಶ

ಸಂಸತ್ತು, ವಿಧಾನಮಂಡಲ ಜನ ಧ್ವನಿಯಾಗಲಿ: ಹೆಚ್.ಡಿ. ದೇವೇಗೌಡ

Nagaraja AB

ನವದೆಹಲಿ: ಸಂಸತ್ತು ಮತ್ತು ವಿಧಾನಮಂಡಲಗಳು ಜನರ ಧ್ವನಿಯಾಗಿ ಕೆಲಸ ಮಾಡಬೇಕು, ಮುಂದಿನ ಅಧಿವೇಶನವಾದಲ್ಲಾದರೂ ಅರ್ಥಪೂರ್ಣ ಚರ್ಚೆ ನಡೆಯಬೇಕು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಒತ್ತಿ ಹೇಳಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿವೇಶನದಲ್ಲಿ ಜನಸಾಮಾನ್ಯರ ಹಾಗೂ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ಮತ್ತು ಅವುಗಳಿಗೆ ಪರಿಹಾರ ಹುಡುಕುವ ಯಾವ ಪ್ರಯತ್ನವೂ ನಡೆಯದಿರುವುದು ತುಂಬಾ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ರಾಜ್ಯಸಭೆ ಕಲಾಪಗಳಿಗೆ ನಾನು ಗೈರುಹಾಜರಾಗಿಲ್ಲ ಆದರೆ ಸದನದಲ್ಲಿ ಮಾತನಾಡುವ ಅವಕಾಶ ಸಿಗಲಿಲ್ಲ ಎಂಬ ನೋವು ಕಾಡುತ್ತಿದೆ ಮುಂದಿನ ಅಧಿವೇಶನದಲ್ಲಿ ದೇಶದ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಮೊದಲ ಬಾರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ 12 ಮಹಿಳೆಯರಿಗೆ, 8 ಎಸ್ಸಿ, 12 ಎಸ್ಟಿ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ . ಇದು ಸಾಮಾಜಿಕ ನ್ಯಾಯವೋ, ಚುನಾವಣೆ ತಂತ್ರವೋ ಗೊತ್ತಿಲ್ಲ ಆದರೆ ಅದು ಏನೇ ಇದ್ದರೂ ಮೋದಿಯವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಮುಂದಿನ ಅಧಿವೇಶನ ಸುಗಮವಾಗಿ ನಡೆಯುವಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಭೇಟಿಯಾದ ನಂತರ ಬಿಜೆಪಿ ಶಾಸಕ ಪ್ರೀತಮ್ ಗೌಡ ಅಸಮಧಾನ ಹೊರ ಹಾಕಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅಷ್ಟು ಕೆಳಮಟ್ಟಕ್ಕೆ ನನ್ನನ್ನು ಇಳಿಸಬೇಡಿ, ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ನನ್ನಿಂದ ಸರಕಾರಕ್ಕೆ ಏನೂ ತೊಂದರೆ ಆಗುವುದಿಲ್ಲ ಎಂದಿದ್ದೇನೆ ಅಷ್ಟೇ ನೆಲ, ಜಲ, ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲದಕ್ಕೂ ಸಿದ್ದ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

SCROLL FOR NEXT