ದೇಶ

ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಅರ್ಚಕರಿಗೆ ಗರ್ಭಗೃಹ ಪ್ರವೇಶಕ್ಕೆ ಅಡ್ಡಿ: ಮಹಾಕಾಲ ದೇವಾಲಯದಲ್ಲಿ ಭುಗಿಲೆದ್ದ ವಿವಾದ!

Srinivas Rao BV

ಉಜ್ಜೈನ್: ಮಧ್ಯಪ್ರದೇಶದ ಪುರಾಣಪ್ರಸಿದ್ಧ ಮಹಾಕಾಲ ದೇವಾಲಯದಲ್ಲಿ ವಿವಾದ ಭುಗಿಲೆದ್ದಿದೆ.

ವಿಶ್ವವಿಖ್ಯಾತ ದೇವಾಲಯದಲ್ಲಿ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಬಿಜೆಪಿ ನಾಯಕರ ಉಪಸ್ಥಿತಿ ಇದ್ದಾಗ ಅರ್ಚಕರಿಗೆ ಗರ್ಭಗೃಹಕ್ಕೆ ತೆರಳಲು ಬಿಡಲಿಲ್ಲ ಎಂದು ಅರ್ಚಕರು ಆರೋಪಿಸಿರುವುದು ಈ ವಿವಾದ ಭುಗಿಲೇಳುವುದಕ್ಕೆ ಕಾರಣ ಎಂದು ಹೇಳಿದ್ದಾರೆ. 

ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಈ ಘಟನೆ ನಡೆದಿದ್ದು, ಬಿಜೆಪಿಯ ವಿಜಯವರ್ಗೀಯ ಹಾಗೂ ಇಬ್ಬರು ಶಾಸಕರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಪ್ರತಿ ದಿನ ಮುಂಜಾನೆ ಇಲ್ಲಿನ ಜ್ಯೋತಿರ್ಲಿಂಗಕ್ಕೆ ಅರ್ಚಕರ ತಂಡದಿಂದ ಭಸ್ಮ ಆರತಿ ನಡೆಯಲಿದೆ.  ಶುಕ್ರವಾರ ನಡೆದ ಈ ಪೂಜೆಯ ವೇಳೆಯಲ್ಲಿ ಬಿಜೆಪಿ ನಾಯಕರು ಇದ್ದರು. ಆದ ಕಾರಣ ತಮಗೆ ಗರ್ಭಗೃಹ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂದು ತಂಡದಲ್ಲಿದ್ದ ಅರ್ಚಕರೊಬ್ಬರು ಆರೋಪಿಸಿದ್ದಾರೆ. 

"ಬಿಜೆಪಿ ನಾಯಕರಿದ್ದ ಕಾರಣ ಪ್ರವೇಶ ನಿರಾಕರಿಸಲಾಗುತ್ತದೆ ಎಂಬುದಾದರೆ ದೇವಾಲಯದ ಆಡಳಿತ ನಮಗೇಕೆ ಪಾಸ್ ನೀಡಿತ್ತು? ಹಾಗಿದ್ದರೆ ಪಾಸ್ ನ್ನು ಎಸೆಯುವುದು ಒಳ್ಳೆಯದು ಅಲ್ಲವೇ? ಈ ಕಾರಣದಿಂದಾಗಿ ಗರ್ಭಗೃಹ ಪ್ರವೇಶಿಸದಂತೆ ಅರ್ಧಗಂಟೆ ನನ್ನನ್ನು ತಡೆಯಲಾಗಿತ್ತು" ಎಂದು ಅರ್ಚಕ ಅಜಯ್ ಗುರು ಹೇಳಿದ್ದಾರೆ. 

ಗರ್ಭಗೃಹ ಪ್ರವೇಶಿಸುವುದಕ್ಕೆ ಅನುಮತಿ ನೀಡದೇ ಇದ್ದದ್ದನ್ನು ವಿರೋಧಿಸಿ ಅರ್ಚಕರು ಕೂಗಾಡುತ್ತಿದ್ದ ದೃಶ್ಯಗಳು ಹಾಗೂ ಪ್ರವೇಶ ನಿರ್ಬಂಧಿಸಿದ್ದಲ್ಲಿ ನಿಂತಿದ್ದ ದೃಶ್ಯಗಳು ವೈರಲ್ ಆಗತೊಡಗಿವೆ. ಈ ಘಟನೆಯನ್ನು ಉಜ್ಜೈನ್ ಜಿಲ್ಲಾ ಕಲೆಕ್ಟರ್ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಅರ್ಚಕ ಅಜಯ್ ಗುರು ಎಚ್ಚರಿಸಿದ್ದಾರೆ. 

SCROLL FOR NEXT