ದೇಶ

ತಾಲಿಬಾನ್ ಪರ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಂಸದನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Lingaraj Badiger

ಲಖನೌ: ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದ ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರೆಹಮಾನ್ ಬರ್ಕ್ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಸಂಭಲ್ ಪೊಲೀಸರು ಸಂಸದ ಹಾಗೂ ಇತರ ಇಬ್ಬರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಖಚಿತಪಡಿಸಿದ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು, ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಕ್ಕಾಗಿ ಸಂಸದರ ವಿರುದ್ಧ ದೂರು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ.

"ಇಂತಹ ಹೇಳಿಕೆಗಳು ದೇಶದ್ರೋಹಕ್ಕೆ ಅರ್ಹವಾಗಿವೆ. ಹಾಗಾಗಿ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 153 ಎ, 295 ಅಡಿಯಲ್ಲಿ ಸಂಸದರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಇತರ ಇಬ್ಬರು ವ್ಯಕ್ತಿಗಳಾದ ಫೈಜಾನ್ ಚೌಧರಿ ಮತ್ತು ಮೊಹಮ್ಮದ್ ಮುಕೀಮ್ ಅವರು ಫೇಸ್ ಬುಕ್ ವೀಡಿಯೋದಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಅವರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ ಎಂದು ಸಂಭಾಲ್ ಎಸ್ಪಿ ಹೇಳಿದ್ದಾರೆ.

ಸಂಸದ ಹಾಗೂ ಇತರ ಇಬ್ಬರ ವಿರುದ್ಧ ಸ್ಥಳೀಯ ಬಿಜೆಪಿ ನಾಯಕ ರಾಜೇಶ್ ಸಿಂಘಾಲ್ ಅವರು ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ರೆಹಮಾನ್ ಬರ್ಕ್, ಅಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಭಾರತದ ಪ್ರಜೆಯೇ ಹೊರತು ಅಫ್ಘಾನಿಸ್ತಾನದವನಲ್ಲ. ಹಾಗಾಗಿ ಅಲ್ಲಿ ಏನು ನಡೆಯುತ್ತಿದೆ ಎಂಬುದ ನನಗೆ ಸಂಬಂಧಿಸಿದಲ್ಲ. ನಾನು ನನ್ನ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತೇನೆ’ಎಂದು ಸಮಾಜವಾದಿ ಪಕ್ಷದ ಸಂಸದರು ಹೇಳಿದ್ದಾರೆ.

SCROLL FOR NEXT