ದೇಶ

ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಸೇನಾಧಿಕಾರಿ ಹುತಾತ್ಮ

Lingaraj Badiger

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್ಕೌಂಟರ್‌ನಲ್ಲಿ ಸೇನೆಯ ಕಿರಿಯ ನಿಯೋಜಿತ ಅಧಿಕಾರಿ(ಜೆಸಿಒ) ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಥನಮಂಡಿ ಬೆಲ್ಟ್‌ನಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಯಿತು. ಪ್ರತಿದಾಳಿಯಲ್ಲಿ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

"ಎನ್‌ಕೌಂಟರ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ರಾಷ್ಟ್ರೀಯ ರೈಫಲ್ಸ್‌ನ ಜೆಸಿಒ ಅವರನ್ನು ತಕ್ಷಣವೇ ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ" ಎಂದು ಜಮ್ಮುವಿನ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಅವರು ಹೇಳಿದ್ದಾರೆ.

ಈ ವರ್ಷ ಆಗಸ್ಟ್‌ನಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಎನ್ಕೌಂಟರ್ ಇದಾಗಿದ್ದು, ಆಗಸ್ಟ್ 6 ರಂದು, ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರರನ್ನು ಥನಮಂಡಿ ಬೆಲ್ಟ್ ನಲ್ಲಿ ಭದ್ರತಾ ಪಡೆಗಳು ಎನ್ ಕೌಂಟರ್ ಮಾಡಿದ್ದರು.

SCROLL FOR NEXT