ದೇಶ

ನಾಗ್ಪುರದಿಂದ ಗಡಿಪಾರು ಆಗಿದ್ದ ಅಫ್ಘಾನ್ ವ್ಯಕ್ತಿ ತಾಲಿಬಾನ್ ಸೇರಿಕೊಂಡಿದ್ದಾನೆ: ಪೊಲೀಸರು

Lingaraj Badiger

ನಾಗ್ಪುರ: ಈ ವರ್ಷ ಜೂನ್‌ನಲ್ಲಿ ನಾಗ್ಪುರದಿಂದ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಲಾಗಿದ್ದ ಅಫ್ಘಾನ್ ವ್ಯಕ್ತಿ ತಾಲಿಬಾನ್ ಸೇರಿಕೊಂಡಿದ್ದು, ಕೈಯಲ್ಲಿ ರೈಫಲ್ ಹಿಡಿದಿರುವ ಆತನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ .

"30 ವರ್ಷದ ನೂರ್ ಮೊಹಮ್ಮದ್ ಅಜೀಜ್ ಮೊಹಮ್ಮದ್ ಕಳೆದ 10 ವರ್ಷಗಳಿಂದ ನಾಗಪುರದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದರು. ಅವರು ನಗರದ ದಿಗೋರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಕೊನೆಗೆ ಆತನನ್ನು ಬಂಧಿಸಿ ಜೂನ್ 23 ರಂದು ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಿದ್ದರು" ಎಂದು ಅವರು ಹೇಳಿದ್ದಾರೆ.

"ನೂರ್ ಮೊಹಮ್ಮದ್ ನನ್ನು ಗಡಿಪಾರು ಮಾಡಿದ ನಂತರ, ಆತ ತಾಲಿಬಾನ್ ಸೇರಿಕೊಂಡಿದ್ದಾನೆ ಎಂದು ತೋರುತ್ತದೆ ಮತ್ತು ಗನ್ ಹಿಡಿದಿರುವ ಆತನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ" ಎಂದು ಅವರು ತಿಳಿಸಿದರು.

ಈ ಹಿಂದೆ ತನಿಖೆಯ ಸಮಯದಲ್ಲಿ, ನೂರ್ ಮೊಹಮ್ಮದ್ 2010 ರಲ್ಲಿ ನಾಗ್ಪುರಕ್ಕೆ ಆರು ತಿಂಗಳ ಪ್ರವಾಸಿ ವೀಸಾದಲ್ಲಿ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ ನಂತರ ಕಳೆದ ಭಾನುವಾರ ತಾಲಿಬಾನ್ ಸಂಪೂರ್ಣ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

SCROLL FOR NEXT