ದೇಶ

ಕಾಬೂಲ್ ನಿಂದ ಭಾರತೀಯರ ರಕ್ಷಿಸಲು  ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆಗೆ ಅನುಮತಿ 

Srinivas Rao BV

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಕಾಬೂಲ್ ನಿಂದ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆಗೆ ಭಾರತಕ್ಕೆ ಅನುಮತಿ ದೊರೆತಿದೆ.

ಆ.15 ರಂದು ಅಫ್ಘಾನಿಸ್ತಾನ ತಾಲೀಬಾನ್ ವಶವಾದರೂ ಕಾಬೂಲ್ ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಂತ್ರಿಕವಾಗಿ ಅಮೆರಿಕ ಹಾಗೂ ನ್ಯಾಟೋ ಪಡೆಗಳ ನಿಯಂತ್ರಣದಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಭಾರತಕ್ಕೆ ಅನುಮತಿ ನೀಡಿವೆ ಎಂದು ಎಎನ್ಐ ಮೂಲಗಳು ತಿಳಿಸಿವೆ.

ಅಮೆರಿಕ ಹಾಗೂ ನ್ಯಾಟೋ ಪಡೆಗಳು ನೀಡಿರುವ ಮಾಹಿತಿಯ ಪ್ರಕಾರ ಅವರಿಂದ ಈಗ 25 ವಿಮಾನಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು ತಮ್ಮ ನಾಗರಿಕರನ್ನು, ಶಸ್ತ್ರಾಸ್ತ್ರ ಉಪಕರಣಗಳ ರಕ್ಷಣೆ ಮಾಡಿಕೊಳ್ಳುತ್ತಿವೆ.

ತಾಲೀಬಾನ್ ನ ನಿಯಂತ್ರಣದಲ್ಲಿರುವ ಕಾಬೂಲ್ ನಿಂದ 300 ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಬೇಕಿದ್ದು ತಜಕಿಸ್ತಾನ ಹಾಗೂ ಕತಾರ್ ಮೂಲಕ ಭಾರತೀಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಈ ನಡುವೆ ಇತ್ತೀಚಿನ ವರದಿಗಳ ಪ್ರಕಾರ ಏರ್ ಇಂಡಿಯಾದ ವಿಮಾನವೊಂದು 90 ಪ್ರಯಾಣಿಕರೊಂದಿಗೆ ಶೀಘ್ರವೇ ಭಾರತಕ್ಕೆ ತಲುಪಲಿದೆ. ಎನ್ಎಸ್ ಎ ಅಜಿತ್ ದೋವಲ್ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಮಾತನಾಡಿ ಭಾರತೀಯ ಅಧಿಕಾರಿಗಳನ್ನು ಅಮೆರಿಕದ ಭದ್ರತೆಯಿದ್ದ ವಿಮಾನ ನಿಲ್ದಾಣದಿಂದ ಕರೆತರಲು ಮಾತುಕತೆ ನಡೆಸಿದ ಬಳಿಕ ಭಾರತದ ಮೊದಲ ವಿಮಾನಕ್ಕೆ ಕಾಬೂಲ್ ನಿಂದ ಕಾರ್ಯಾಚರಣೆ ನಡೆಸುವ ಅನುಮತಿ ನೀಡಲಾಗಿತ್ತು.

ಭಾರತ ಈಗಾಗಲೇ ತನ್ನ ರಾಯಭಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ 180 ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಂಡಿದೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಮಂಗಳವಾರದಂದು ಭದ್ರತೆ ಮೇಲಿನ ಸಂಸತ್ ಸ್ಥಾಯಿ ಸಮಿತಿ ಸಭೆ ನಡೆಸಿ, ಭಾರತೀಯರನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಕರೆಸಿಕೊಳ್ಳುವುದಕ್ಕೆ ಎಲ್ಲಾ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

SCROLL FOR NEXT