ದೇಶ

'ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ಬೇಕು, ಸರ್ಕಾರದ ಸುಳ್ಳುಗಳ ಬಯಲು ಮಾಡುವ ಕರ್ತವ್ಯ ಬುದ್ಧಿಜೀವಿಗಳದ್ದು'

Srinivasamurthy VN

ನವದೆಹಲಿ: ಹಾಲಿ ಪರಿಸ್ಥಿತಿಯಲ್ಲಿ ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ನಮಗೆ ಬೇಕಾಗಿದ್ದು, ಸರ್ಕಾರದ ಸುಳ್ಳುಗಳ ಬಯಲು ಮಾಡುವ ಕರ್ತವ್ಯ ಸಾರ್ವಜನಿಕ ಬುದ್ಧಿಜೀವಿಗಳದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ದೇಶದ ಆರನೇ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಂ ಸಿ ಚಗ್ಲಾ ಅವರ ನೆನಪಿನಾರ್ಥವಾಗಿ ನಡೆದ ಸ್ಮಾರಕ ವರ್ಚುವಲ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಸ್ಟಿಸ್ ಚಂದ್ರಚೂಡ್ ಅವರು, 'ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳನ್ನು ಹೊಣೆಯಾಗಿಸುವುದು ಅಗತ್ಯವಾಗಿದೆ ಹಾಗೂ ಸುಳ್ಳುಗಳು, ನಕಲಿ ಸುದ್ದಿಗಳ ವಿರುದ್ಧ ರಕ್ಷಣೆ ಪಡೆಯಬೇಕಿದೆ. ಸರ್ಕಾರದ ಸುಳ್ಳುಗಳನ್ನು ಬಯಲುಗೊಳಿಸುವ ಕರ್ತವ್ಯ ಸಾರ್ವಜನಿಕ ಬುದ್ಧಿಜೀವಿಗಳಿಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಗಾಗಿ ಸರ್ಕಾರದ ಮೇಲೆ ಅತಿಯಾದ ಅವಲಂಬನೆ ಸಲ್ಲ, ಸತ್ಯಕ್ಕಾಗಿ ಸರಕಾರವನ್ನೇ ಅವಲಂಬಿಸುವ  ಹಾಗಿಲ್ಲ. ಸರ್ವಾಧಿಕಾರಿ ಸರ್ಕಾರಗಳು  ಅಧಿಕಾರವನ್ನು ಇನ್ನಷ್ಟು ಸುಭದ್ರಗೊಳಿಸುವ ಸಲುವಾಗಿ ಸುಳ್ಳುಗಳ ಮೇಲೆ ಸದಾ ಅವಂಬಿಸುವುದು ತಿಳಿದ  ವಿಚಾರ. ಕೋವಿಡ್-19 ಅಂಕಿಅಂಶಗಳನ್ನು ಜಗತ್ತಿನ ದೇಶಗಳು ತಿರುಚುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.

ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ನಮಗೆ ಬೇಕು
ಇದೇ ವೇಳೆ ಮಾಧ್ಯಮ ಕರ್ತವ್ಯದ ಕುರಿತು ಮಾತನಾಡಿದ ಅವರು, 'ನಕಲಿ ಸುದ್ದಿಗಳ ಹಾವಳಿಯೂ ಹೆಚ್ಚಾಗಿದೆ. ಇದನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭ ವಿಶ್ವ ಆರೋಗ್ಯ ಸಂಸ್ಥೆಯೂ ಒಪ್ಪಿಕೊಂಡಿದ್ದು, ಅದನ್ನು ಇನ್ಫೋಡೆಮಿಕ್ ಎಂದು ಕರೆದಿದೆ. ಸೆನ್ಸೇಶನ್ ಸೃಷ್ಟಿಸುವ ಸುದ್ದಿಗಳತ್ತ ಆಕರ್ಷಿತವಾಗುವುದು ಮನುಷ್ಯರ ಜಾಯಮಾನ. ಇಂತಹ ಸುದ್ದಿಗಳು ಸಾಮಾನ್ಯವಾಗಿ ಸುಳ್ಳುಗಳನ್ನೇ ಆಧಾರವಾಗಿಸುತ್ತವೆ. ಹೀಗಾಗಿ  ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ನಮಗೆ ಬೇಕು  ಎಂದು ಹೇಳಿದರು.

ನಕಲಿ ಸುದ್ದಿಗಳ ದೂರವಾಗಿಸಲು ಸಾರ್ವಜನಿಕ ಸಂಸ್ಥೆಗಳನ್ನು ಬಲಿಷ್ಠಗೊಳಿಸಬೇಕು
ಅಂತೆಯೇ ನಕಲಿ ಸುದ್ದಿ ಹಾವಳಿ ತಡೆ ಕುರಿತು ಮಾತನಾಡಿದ ಅವರು, 'ನಮ್ಮ ನಂಬಿಕೆಗಳಿಗೆ  ಸೂಕ್ತವಾಗಿರುವ ಸುದ್ದಿಪತ್ರಿಕೆಗಳನ್ನಷ್ಟೇ ನಾವು ಓದುತ್ತೇವೆ. ನಮಗಿಂತ ಭಿನ್ನ ಅಭಿಪ್ರಾಯ ಹೊಂದಿರುವ ಜನರು ಬರೆದಿರುವ ಪುಸ್ತಕಗಳನ್ನು ನಾವು ಓದುವುದಿಲ್ಲ. ಯಾರಾದರೂ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ  ನಾವು ಟಿವಿಯನ್ನು ಮ್ಯೂಟ್ ಮಾಡುತ್ತೇವೆ. ನಕಲಿ ಸುದ್ದಿಗಳನ್ನು ದೂರವಾಗಿಸಲು ನಮ್ಮ ಸಾರ್ವಜನಿಕ ಸಂಸ್ಥೆಗಳನ್ನು ಬಲಿಷ್ಠಗೊಳಿಸಬೇಕಿದೆ. ಯಾವುದೇ ಪ್ರಭಾವದಿಂದ ಮುಕ್ತವಾಗಿರುವ ಮಾಧ್ಯಮ ನಮಗೆ ಬೇಕಿದೆ. ನಿಷ್ಪಕ್ಷಪಾತವಾಗಿ ಸುದ್ದಿ ನೀಡುವ ಮಾಧ್ಯಮಗಳು ನಮಗೆ ಬೇಕಾಗಿದೆ' ಎಂದು ಅವರು ಹೇಳಿದರು.

SCROLL FOR NEXT