ದೇಶ

ಕೋವಿಡ್ 3ನೇ ಅಲೆ ಅಕ್ಟೋಬರ್-ನವೆಂಬರ್ ನಡುವೆ ಪೀಕ್ ಗೆ ಹೋಗಬಹುದು: ಐಐಟಿ-ಕಾನ್ಪುರ ವಿಜ್ಞಾನಿ

Lingaraj Badiger

ನವದೆಹಲಿ: ಸೆಪ್ಟೆಂಬರ್‌ ವೇಳೆಗೆ ಈಗಿರುವ ವೈರಸ್‌ಗಳಿಗಿಂತ ಹೆಚ್ಚು ತೀವ್ರ ರೂಪಾಂತರಿ ಹೊರಹೊಮ್ಮಿದರೆ ಅಕ್ಟೋಬರ್‌ ಮತ್ತು ನವೆಂಬರ್‌ ನಡುವೆ ದೇಶದಲ್ಲಿ ಕೋವಿಡ್ ಮೂರನೇ ಅಲೆ ಪೀಕ್ ಗೆ ಹೋಗಬಹುದು, ಆದರೆ ಅದರ ತೀವ್ರತೆಯು ಎರಡನೇ ಅಲೆಗಿಂತ ಕಡಿಮೆ ಇರುವ ನಿರೀಕ್ಷೆಯಿದೆ ಎಂದು ಐಐಟಿ-ಕಾನ್ಪುರ ವಿಜ್ಞಾನಿ ಸೋಮವಾರ ಹೇಳಿದ್ದಾರೆ.

ಯಾವುದೇ ಹೊಸ ವೈರಾಣು ಉದ್ಭವಿಸದಿದ್ದರೆ, ಪರಿಸ್ಥಿತಿ ಬದಲಾಗುವ ಸಾಧ್ಯತೆಯಿಲ್ಲ ಎಂದು ಕೊರೋನಾ ಸೋಂಕಿನ ಏರಿಕೆಯನ್ನು ಊಹಿಸುವ ಮೂವರು ಸದಸ್ಯರ ತಜ್ಞರ ತಂಡದಲ್ಲಿರುವ ಐಐಟಿ-ಕಾನ್ಪುರದ ವಿಜ್ಞಾನಿ ಮಣೀಂದ್ರ ಅಗರವಾಲ್ ಅವರು ಹೇಳಿದ್ದಾರೆ.

ಕೊರೋನಾ ಮೂರನೇ ಅಲೆ ಪೀಕ್ ಹೋದರೂ ದೇಶಾದ್ಯಂತ ನಿತ್ಯ ಕೇವಲ 1 ಲಕ್ಷ ಪ್ರಕರಣಗಳು ಮಾತ್ರ ವರದಿಯಾಗಬಹುದು. ಮೇ ತಿಂಗಳಲ್ಲಿ ಮಾರಕ ಎರಡನೇ ಅಲೆ ಪೀಕ್ ನಲ್ಲಿದ್ದಾಗ ನಿತ್ಯ 4 ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದವು ಮತ್ತು ಎರಡನೇ ಅಲೆ ಸಾವಿರಾರು ಜನರನ್ನು ಬಲಿ ಪಡೆದಿತ್ತು. "ಯಥಾಸ್ಥಿತಿ ಎಂದರೆ ಯಾವುದೇ ಹೊಸ ರೂಪಾಂತರಿ ಬರುವುದಿಲ್ಲ ಮತ್ತು ಸೆಪ್ಟೆಂಬರ್ ವೇಳೆಗೆ ಶೇ. 50 ರಷ್ಟು ಹೆಚ್ಚು ರೂಪಾಂತರಿ ಬಂದಾಗ ಅದು ಹೊಸ ರೂಪಾಂತರವಾಗುತ್ತದೆ ಎಂದು ಅಗರವಾಲ್ ಟ್ವೀಟ್ ಮಾಡಿದ್ದಾರೆ.

ಮೂರನೇ ಅಲೆ ಕೆಲವು ಹೋಲಿಕೆಯನ್ನು ಹೊಂದಿರುವ ಏಕೈಕ ಸನ್ನಿವೇಶವೆಂದರೆ ಎಪ್ಸಿಲಾನ್ = 1/33 ಹೊಸ ರೂಪಾಂತಿಯಾದರೆ ಈ ಸನ್ನಿವೇಶದಲ್ಲಿ ಹೊಸ ಪ್ರಕರಣಗಳು ದಿನಕ್ಕೆ 1 ಲಕ್ಷಕ್ಕೆ ಹೆಚ್ಚಾಗುತ್ತವೆ ಎಂದು ಅಗರವಾಲ್ ಹೇಳಿದ್ದಾರೆ.

ಸಂಭಾವ್ಯ ಕೋವಿಡ್ 3ನೇ ಅಲೆಯ ಕುರಿತು ಮಾಹಿತಿ ಸಂಗ್ರಹಿಸಲು ತಜ್ಞರು ಗಣಿತದ ಮಾದರಿಗಳನ್ನು ಬಳಸಿಕೊಂಡು ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ದತ್ತಾಂಶವನ್ನು ಸಿದ್ಧಪಡಿಸಿದ್ದು, ಈ ತಂಡದಲ್ಲಿ ಐಐಟಿ-ಕಾನ್ಪುರದ ವಿಜ್ಞಾನಿ ಆಗರ್ವಾಲ್ ಅವರಲ್ಲದೆ, ಐಐಟಿ-ಹೈದರಾಬಾದ್‌ನ ಮತ್ತೊಬ್ಬ  ವಿಜ್ಞಾನಿ ಎಂ ವಿದ್ಯಾಸಾಗರ್ ಮತ್ತು ಸಮಗ್ರ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥ (ವೈದ್ಯಕೀಯ) ಲೆಫ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಅವರೂ ಈ ತಂಡದ ಸದಸ್ಯರಾಗಿದ್ದಾರೆ.

SCROLL FOR NEXT