ದೇಶ

ಅಸ್ಸಾಂ ಸರ್ಕಾರದಿಂದ ಉದ್ಯಮಿ ರತನ್ ಟಾಟಾಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ

Lingaraj Badiger

ಗುವಾಹಟಿ: ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ನೀಡಿದ ಕೊಡುಗೆಯನ್ನು ಗಮನಿಸಿ ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ ಅವರಿಗೆ ರಾಜ್ಯ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಅಸ್ಸಾಂ ಬೈಭವ್'ವನ್ನು ಪ್ರದಾನ ಮಾಡಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗುರುವಾರ ಹೇಳಿದ್ದಾರೆ.

ಟಾಟಾ ಟ್ರಸ್ಟ್ ಸಹಯೋಗದಲ್ಲಿ ಅಸ್ಸಾಂ ಸರ್ಕಾರ ರಾಜ್ಯದಲ್ಲಿ 19 ಕ್ಯಾನ್ಸರ್ ಕೇರ್ ಘಟಕಗಳನ್ನು ಸ್ಥಾಪಿಸುತ್ತಿವೆ. ರತನ್ ಟಾಟಾ ಅವರ ಉಪಸ್ಥಿತಿಯಲ್ಲಿ ಜೂನ್ 2018ರಲ್ಲಿ ಈ ಯೋಜನೆಗೆ ಅಡಿಪಾಯ ಹಾಕಲಾಯಿತು.

ಅಡ್ವಾಂಟೇಜ್ ಅಸ್ಸಾಂ- ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆ 2018ರಲ್ಲಿ ಟಾಟಾ ಟ್ರಸ್ಟ್‌ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆ ಸಂಬಂಧ ಅಸ್ಸಾಂ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. 

'ಅಸ್ಸಾಂ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಸ್ಸಾಂ ಬೈಭವ್ ಅನ್ನು ಅಸ್ಸಾಂನಲ್ಲಿ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ಅಸಾಧಾರಣ ಕೊಡುಗೆ ನೀಡಿದ ರತನ್ ಟಾಟಾ ಅವರಿಗೆ ಪ್ರದಾನ ಮಾಡಲು ನಿರ್ಧರಿಸಿದೆ ಎಂದು' ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ 'ಅಸ್ಸಾಂ ರತ್ನ' ಎಂದು ಕರೆಯಲ್ಪಡುತ್ತಿದ್ದ ಈ ಪ್ರಶಸ್ತಿಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶರ್ಮಾ ನೇತೃತ್ವದ ಸರ್ಕಾರವು 'ಅಸ್ಸಾಂ ಬೈಭವ್' ಎಂದು ಮರುನಾಮಕರಣ ಮಾಡಿದೆ.

SCROLL FOR NEXT