ದೇಶ

ವಾಯು ಮಾಲಿನ್ಯ: ಮುಂದಿನ ಆದೇಶದವರೆಗೂ ನಾಳೆಯಿಂದ ದೆಹಲಿಯಲ್ಲಿ ಶಾಲೆಗಳು ಸ್ಥಗಿತ- ಸಚಿವ ಗೋಪಾಲ್ ರಾಯ್

Srinivasamurthy VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಸುಪ್ರೀಂ ಕೋರ್ಟ್ ವಾಯು ಮಾಲಿನ್ಯ ವಿಚಾರವಾಗಿ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ನಗರದಲ್ಲಿ ವಾಯುಮಾಲಿನ್ಯದ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ಪುನರಾರಂಭಿಸುವ ನಿರ್ಧಾರಕ್ಕೆ ಚಾಟಿ ಬೀಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ದೆಹಲಿ ಸರ್ಕಾರ ದೈಹಿಕ ತರಗತಿಗಳನ್ನು ಸ್ಥಗಿತಗೊಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರು, 'ಮುಂದಿನ ಆದೇಶದವರೆಗೂ ಶಾಲೆಗಳನ್ನು ಸ್ಥಗಿತಗೊಳಿಸಲಾಗುವುದು. ವಾಯು ಗುಣಮಟ್ಟ ಸುಧಾರಿಸುವ ಮುನ್ಸೂಚನೆಯನ್ನು ಪರಿಗಣಿಸಿ ನಾವು ಶಾಲೆಗಳನ್ನು ಪುನಃ ತೆರೆದಿದ್ದೇವೆ. ಆದಾಗ್ಯೂ, ವಾಯು ಮಾಲಿನ್ಯದ ಮಟ್ಟವು ಮತ್ತೆ ಹೆಚ್ಚಿದೆ . ಹೀಗಾಗಿ ಮುಂದಿನ ಆದೇಶದವರೆಗೆ ನಾವು ಶುಕ್ರವಾರದಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ನವೆಂಬರ್ 13 ರಿಂದ ಮುಚ್ಚಲ್ಪಟ್ಟ ನಂತರ, ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ತರಗತಿಗಳು ಸರ್ಕಾರದ ಆದೇಶದ ಬಳಿಕ ಸೋಮವಾರದಿಂದ ಪುನರಾರಂಭಗೊಂಡಿದ್ದವು. 
 

SCROLL FOR NEXT