ದೇಶ

ಮೊದಲು 2 ಡೋಸ್ ಲಸಿಕೆ ಗುರಿಗೆ ಆದ್ಯತೆ ನೀಡಿ: ಬೂಸ್ಟರ್ ಡೋಸ್ ಗೆ ಒತ್ತಾಯದ ನಡುವೆ ತಜ್ಞರ ಸಲಹೆ

Srinivas Rao BV

ನವದೆಹಲಿ: ಭಾರತದಲ್ಲಿ ಇನ್ನೂ ಹಲವು ಮಂದಿಗೆ ಕೋವಿಡ್-19 ವಿರುದ್ಧದ ಪ್ರಾಥಮಿಕ ಹಂತದ ರಕ್ಷಣೆ ನೀಡುವ 2 ನೇ ಡೋಸ್ ಲಸಿಕೆ ಸಿಕ್ಕಿಲ್ಲ ಆದ್ದರಿಂದ ಅರ್ಹ ವ್ಯಕ್ತಿಗಳಿಗೆ 2 ನೇ ಡೋಸ್ ಲಸಿಕೆಯನ್ನು ನೀಡುವತ್ತ ಹೆಚ್ಚಿನ ಗಮನಹರಿಸಬೇಕಿದೆ ಎಂದು ಭಾರತೀಯ ವಿಜ್ಞಾನಿಗಳು ಹೇಳಿದ್ದಾರೆ. 

ಜಗತ್ತಿನಾದ್ಯಂತ ಕೊರೋನಾ ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ಪತ್ತೆಯಾಗಿದ್ದು, ಭಾರತದಲ್ಲೂ ಸೋಂಕು ಪೀಡಿತರಿರುವುದು ದೃಢಪಟ್ಟಿರುವುದರಿಂದ ಬೂಸ್ಟರ್ ಡೋಸ್ ಲಸಿಕೆ ನೀಡುವುದಕ್ಕೆ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರು, ಬೂಸ್ಟರ್ ಡೋಸ್ ಗಿಂತಲೂ ಮುನ್ನ  ಮೊದಲು 2 ಡೋಸ್ ಲಸಿಕೆ ಗುರಿ ತಲುಪುವುದಕ್ಕೆ ಆದ್ಯತೆ ನೀಡಬೇಕೆಂದು ಹೇಳುತ್ತಿದ್ದಾರೆ. 

ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್ ಗಳನ್ನು ನೀಡುವುದನ್ನು ಪ್ರಾರಂಭಿಸಲಾಗಿದೆ. ಆದರೆ ಭಾರತದಲ್ಲಿ ಆದ್ಯತೆ ಬೇರೆಯದ್ದಾಗಿರಬೇಕಾಗಿದೆ ಎಂದು ತಜ್ಞರು ಹೇಳಿದ್ದು, ಬೃಹತ್ ಪ್ರಮಾಣದಲ್ಲಿನ ಲಸಿಕೆ ಅಭಿಯಾನ ಪ್ರಾರಂಭವಾಗಿ ಇನ್ನೂ 6-8 ತಿಂಗಳಷ್ಟೇ ಕಳೆದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

40 ವರ್ಷಗಳ ಮೇಲ್ಪಟ್ಟ ವಯಸ್ಸಿನ ಹೆಚ್ಚು ಅಪಾಯ ಎದುರಿಸುತ್ತಿರುವ ಹಾಗೂ ಕೋವಿಡ್-19 ಸೋಂಕು ಹರಡುವ ವಾತಾವರಣಕ್ಕೆ ತೆರೆದುಕೊಳ್ಳುವ ಜನಸಂಖ್ಯೆಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ಭಾರತದ SARS-CoV-2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಮ್ ಶಿಫಾರಸು ಮಾಡಿದ್ದು, ತಜ್ಞರ ಅಭಿಪ್ರಾಯ ಇದಕ್ಕೆ ಬೇರೆಯದ್ದಾಗಿಯೇ ಇದೆ. 

ನಮ್ಮ ದೇಶದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಂದಿ ಇದ್ದು, ಅವರಿಗೆ ಲಸಿಕೆ ನೀಡಿ, ಎರಡನೇ ಡೋಸ್ ನ್ನು ಪೂರ್ಣಗೊಳಿಸುವವರೆಗೂ, ಮೂರನೇ ಡೋಸ್ ಲಸಿಕೆಯನ್ನು ಪ್ರಾರಂಭಿಸುವುದು ಸೂಕ್ತವಲ್ಲ ಎಂದು ಇಮ್ಯುನಾಲಜಿಸ್ಟ್ ವಿನೀತಾ ಬಲ್ ಹೇಳಿದ್ದಾರೆ. 

SCROLL FOR NEXT