ದೇಶ

ಕೋವಿಡ್ ಕೇಸ್ ಹೆಚ್ಚಳ: ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

Nagaraja AB

ನವದೆಹಲಿ: ಕೋವಿಡ್-19 ಹರಡದಂತೆ ನಿಯಂತ್ರಣ ಹಾಗೂ ಮರಣ ಪ್ರಮಾಣ ತಡೆಗೆ ಸೋಂಕು ಪತ್ತೆ, ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಪತ್ರ ಬರೆದಿದೆ. ಕೆಲ ಜಿಲ್ಲೆಗಳಲ್ಲಿ  ಸೋಂಕು ಪ್ರಮಾಣ, ಸಾಪ್ತಾಹಿಕ ಪಾಸಿಟಿವಿಟಿ ದರ ಹಾಗೂ ವಾರದ ಸಾವಿನ ದರ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಈ ರೀತಿಯ ಸಲಹೆ ನೀಡಿದೆ.

ಜಿನೋಮ್ ಸೀಕ್ವೆನ್ಸಿಂಗ್ ಗಾಗಿ ಎಲ್ಲಾ ಪಾಸಿಟಿವ್ ಮಾದರಿಗಳನ್ನು ಕಳುಹಿಸುವುದಲ್ಲದೇ, ಅಂತಾರಾಷ್ಟ್ರೀಯ ಪ್ರಯಾಣಿರ ಮೇಲೆ ಎಲ್ಲಾ ರಾಜ್ಯಗಳು ನಿಗಾ ವಹಿಸಬೇಕು, ಹಾಟ್ ಸ್ಪಾಟ್ ಗಳ ಮೇಲ್ವಿಚಾರಣೆ ಮಾಡಬೇಕು, ಪಾಸಿಟಿವ್ ಜನರನ್ನು ಪ್ರಾಮಾಣಿಕವಾಗಿ ಪತ್ತೆ ಹಚ್ಚಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶನಿವಾರ ಹೇಳಿದ್ದಾರೆ. 

ಪ್ರಮುಖವಾಗಿ ಐಇಸಿ ಮತ್ತು ಸಮುದಾಯದ ಮೇಲೆ ಗಮನ ಕೇಂದ್ರಿಕರಿಸುವಂತೆ ಅವರು ತಿಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ  ಅವರಿಗೆ ಬರೆದ ಪತ್ರದಲ್ಲಿ ಡಿಸೆಂಬರ್ 3 ಕ್ಕೆ ಕೊನೆಗೊಂಡಂತೆ ಈ ತಿಂಗಳಲ್ಲಿ  ಕರ್ನಾಟಕದಲ್ಲಿ 8,073 ಹೊಸ ಪ್ರಕರಣಗಳು ವರದಿಯಾಗಿವೆ. ನವೆಂಬರ್ 22 ರಿಂದ 29ರ ನಡುವಿನ ಒಂದು ವಾರದ ಅವಧಿಯಲ್ಲಿ ಹೊಸ ಸಾವಿನ ಪ್ರಕರಣ 22 ರಿಂದ 29ಕ್ಕೆ ಏರಿಕೆಯಾಗಿದೆ. ವಾರದಲ್ಲಿನ ಹೊಸ ಪ್ರಕರಣಗಳ ಸಂಖ್ಯೆ 1, 664ರಿಂದ 2,272ಕ್ಕೆ ಏರಿಕೆಯಾಗಿದೆ ಎಂದು ಭೂಷಣ್ ತಿಳಿಸಿದ್ದಾರೆ.

ನವೆಂಬರ್ 25ಕ್ಕೆ ಕೊನೆಗೊಂಡ ವಾರದಲ್ಲಿ ಬೆಂಗಳೂರು ನಗರದಲ್ಲಿ ಎಂಟು ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದರೆ, ಡಿಸೆಂಬರ್ 2ಕ್ಕೆ ಕೊನೆಯಾದ ವಾರದಲ್ಲಿ 14 ಸಾವಿನ ಪ್ರಕರಣ ವರದಿಯಾಗಿರುವುದಾಗಿ ಅವರು ಹೇಳಿದ್ದಾರೆ. ತುಮಕೂರು, ಧಾರವಾಡ, ಬೆಂಗಳೂರು ನಗರ, ಮೈಸೂರು ಜಿಲ್ಲೆಗಳಲ್ಲಿ ವಾರದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

SCROLL FOR NEXT