ದೇಶ

ನಾಗಾಲ್ಯಾಂಡ್: ಭದ್ರತಾಪಡೆಗಳಿಂದ 13 ನಾಗರಿಕರ ಹತ್ಯೆ, ಹಾರ್ನ್ಬಿಲ್ ಹಬ್ಬ ರದ್ದುಗೊಳಿಸಿದ ಬುಡಕಟ್ಟು ಮಂದಿ

Srinivas Rao BV

ಗುವಾಹಟಿ: ನಾಗಾಲ್ಯಾಂಡ್ ನಲ್ಲಿ ಭದ್ರತಾ ಪಡೆಗಳು 13 ನಾಗರಿಕರನ್ನು ಭಯೋತ್ಪಾದಕರೆಂದು ಭಾವಿಸಿ ಹತ್ಯೆ ಮಾಡಿವೆ. ಮೋನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ಯಾರಾ ಕಮಾಂಡೋಗಳೆಂದು ಹೇಳಲಾಗಿರುವ ಸಿಬ್ಬಂದಿಗಳು ನಾಗರಿಕರನ್ನು ಉಗ್ರರೆಂದು ತಪ್ಪಾಗಿ ಭಾವಿಸಿ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. 

ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸಂತ್ರಸ್ತರು ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಟ್ರಕ್ ನಲ್ಲಿ ವಾಪಸ್ಸಾಗುತ್ತಿದ್ದರು. ದೈನಂದಿನ ವೇತನ ಪಡೆಯುತ್ತಿದ್ದ ಕಾರ್ಮಿಕರಾಗಿದ್ದ ಇವರು ವಾರಾಂತ್ಯಗಳಲ್ಲಿ ಮಾತ್ರ ಮನೆಗೆ ಬರುತ್ತಿದ್ದರು. ಅಂತೆಯೇ ಶನಿವಾರದಂದು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಅವರನ್ನು ಭಯೋತ್ಪಾದಕರೆಂದು ಭಾವಿಸಿ ಪ್ಯಾರಾ ಕಮಾಂಡೋಗಳು ದಾಳಿ ನಡೆಸಿದ್ದಾರೆ. 

ಮೃತರು ಕೊನ್ಯಾಕ್ (ಬುಡಕಟ್ಟು) ಸಮುದಾಯದವರಾಗಿದ್ದು, ಘಟನೆಯಲ್ಲಿ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದರೆ, ಚಿಕಿತ್ಸೆ ಪಡೆಯುತ್ತಿದ್ದ 7 ಮಂದಿ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬುಡಕಟ್ಟು ನಾಯಕ ಹೇಳಿದ್ದಾರೆ.
 
ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ನ್ಯಾಯದಾನವಾಗದೇ ಇದ್ದಲ್ಲಿ ಶವಗಳನ್ನು ಕುಟುಂಬ ಸದಸ್ಯರು ಪಡೆಯುವುದಿಲ್ಲ. ನಾವು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆಗಳ ಮೊರೆ ಹೋಗುತ್ತೇವೆ" ಎಂದು ಹೇಳಿದ್ದಾರೆ. 

ಸಂತ್ರಸ್ತರು ಜೀವಿಸುತ್ತಿದ್ದ ಗ್ರಾಮದಿಂದ ಅವರು ಕೆಲಸ ಮಾಡುತ್ತಿದ್ದ ಗಣಿ 15 ಕಿ.ಮೀ ದೂರವಿದೆ. ಬುಡಕಟ್ಟು ಮಂದಿ ಸಾವನ್ನಪ್ಪಿರುವುದರಿಂದ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್ ಪಿಒ) ವಾರ್ಷಿಕ ಹಾರ್ನ್ಬಿಲ್ ಹಬ್ಬವನ್ನು ರದ್ದುಪಡಿಸಿದೆ. 

SCROLL FOR NEXT