ದೇಶ

ಸಿಡಿಎಸ್ ಬಿಪಿನ್ ರಾವತ್ ಪಂಚ ಭೂತಗಳಲ್ಲಿ ಲೀನ: ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ 

Nagaraja AB

ನವದೆಹಲಿ: ತಮಿಳುನಾಡಿನ ಕುನೂರು ಬಳಿ ಬುಧವಾರ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್  ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾದರು. ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. 

ಸೇನಾ ಸಿಬ್ಬಂದಿ 17 ಬಾರಿ ಕುಶಾಲ ತೋಪು ಸಿಡಿಸಿದ ನಂತರ ರಾವತ್ ಅವರ ಪುತ್ರಿಯರಾದ ಕೃತಿಕಾ ಹಾಗೂ ತಾರಿಣಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ತಮ್ಮ ತಂದೆ-ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು, ಫ್ರಾನ್ಸ್ ನ ಭಾರತದ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಮತ್ತು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್  ಹಾಗೂ ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದ ಮಿಲಿಟರಿ ಕಮಾಂಡರ್ ಗಳು ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿದ್ದರು.

ಚಿತಾಗಾರದ ಹೊರಗಡೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಘೋಷಣೆ ಕೂಗುತ್ತಾ, ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಂತ್ಯ ಕ್ರಿಯೆ ವೇಳೆ ಸುಮಾರು 800 ಸೇನಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬುಧವಾರ ಹೆಲಿಕಾಪ್ಟರ್ ಪತನದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.

SCROLL FOR NEXT