ದೇಶ

ಗುಜರಾತ್ ನಲ್ಲಿ ಮತ್ತೆ ಇಬ್ಬರಿಗೆ ಓಮಿಕ್ರಾನ್: ಸೋಂಕಿತ ವ್ಯಕ್ತಿಯ ಪತ್ನಿ, ಸೋದರ ಮಾವನಿಗೆ ಪಾಸಿಟಿವ್

Lingaraj Badiger

ಜಾಮ್‌ನಗರ: ಗುಜರಾತ್‌ನಲ್ಲಿ ವಾರದ ಹಿಂದೆ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಎನ್‌ಆರ್‌ಐ ವ್ಯಕ್ತಿಯ ಪತ್ನಿ ಮತ್ತು ಸೋದರ ಮಾವನಿಗೂ ಕೋವಿಡ್-19 ಹೊಸ ರೂಪಾಂತರಿ ದೃಢಪಟ್ಟಿದೆ ಎಂದು ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು(ಜೆಎಂಸಿ) ಶುಕ್ರವಾರ ತಿಳಿಸಿದ್ದಾರೆ.

ಇದರೊಂದಿಗೆ, ಗುಜರಾತ್‌ನಲ್ಲಿ ಓಮಿಕ್ರಾನ್‌ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ ಮತ್ತು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಗಾಂಧಿನಗರದಲ್ಲಿರುವ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್(ಜಿಬಿಆರ್‌ಸಿ) ನಲ್ಲಿ ಸ್ವ್ಯಾಬ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಒಳಪಡಿಸಲಾಗಿದ್ದು, ಇಬ್ಬರಿಗೂ ಓಮಿಕ್ರಾನ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರನ್ನು ನಗರದ ಸರ್ಕಾರಿ ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಶೇಷ ಓಮಿಕ್ರಾನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜೆಎಂಸಿ ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 4 ರಂದು ಜಿಂಬಾಬ್ವೆಯಿಂದ ಜಾಮ್ ನಗರಕ್ಕೆ ಆಗಮಿಸಿದ 72 ವರ್ಷದ ಎನ್‌ಆರ್‌ಐ ಓಮಿಕ್ರಾನ್ ಪಾಸಿಟಿವ್ ಬಂದಿತ್ತು. ಈಗ ಅವರ ಪತ್ನಿ ಮತ್ತು ಸೋದರ ಮಾವನಿಗೂ ಪಾಸಿಟಿವ್ ಬಂದಿದೆ.

SCROLL FOR NEXT