ದೇಶ

ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉತ್ತಮ ನಿದರ್ಶನ: ರಾಜ್ಯಪಾಲ ಜಗದೀಪ್ ದಂಖರ್

Srinivasamurthy VN

ಕೊಲ್ಕತ್ತಾ: ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉತ್ತಮ ನಿದರ್ಶನ ಎಂದು ರಾಜ್ಯಪಾಲ ಜಗದೀಪ್ ದಂಖರ್ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ನಡೆಯ ಮೇಲೆ ರಾಜ್ಯಪಾಲ ಜಗದೀಪ್ ದಂಖರ್ ಶುಕ್ರವಾರ ಮತ್ತೆ ವಾಗ್ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆಗೆ ಉತ್ತಮ ನಿದರ್ಶನ ಎಂದು ಆರೋಪಿಸಿದರು.

ಮಾನವ ಹಕ್ಕುಗಳ ದಿನದಂದು ವಿಡಿಯೋ ಕಾಲ್‍ನಲ್ಲಿ ಮಾತನಾಡಿದ ಅವರು, 'ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬರಲು ಜನರ ಹಕ್ಕುಗಳನ್ನು ಎತ್ತಿಹಿಡಿಯುವುದು ಮುಖ್ಯವಾಗಿದೆ. ಪಶ್ಚಿಮ ಬಂಗಾಳವು ಮಾನವ ಹಕ್ಕುಗಳ ಉಲ್ಲಂಘನೆಗೆ ಉತ್ತಮ ನಿದರ್ಶನವಾಗಿದೆ. ತಮ್ಮ ಹಕ್ಕುಗಳ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಜನರಿಗೆ ಈಗಲೂ ಭಯವಿದೆ ಎಂದು ಹೇಳಿದರು.

ಅಂತೆಯೇ, 'ರಾಜ್ಯದಲ್ಲಿ ಆಡಳಿತಾಧಿಕಾರಿಗಳು ರಾಜಕಿಯ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಆಡಳಿತವು ಸಂವಿಧಾನ ಮತ್ತು ಕಾನೂನು ನಿಯಮದಿಂದ ದೂರವಿದೆ ಎಂದು ಹೇಳಿದ್ದಾರೆ.

ಅಲ್ಲದೆ ಸಿಎಂ ಮಮತಾ ವಿರುದ್ಧ ಹರಿಹಾಯ್ದಿರುವ ರಾಜ್ಯಪಾಲರು, ಮಮತಾ ಬ್ಯಾನರ್ಜಿ ಅವರು ಮೂಲಭೂತ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳನ್ನು ಸೋಲಿಸಲು ಜನರು ಒಗ್ಗಟ್ಟಿನಲ್ಲಿರಬೇಕು. ದ್ವೇಷ ಮತ್ತು ಅಸಮಾನತೆ ತೊಡೆದುಹಾಕಿ ಉನ್ನತ ಮಟ್ಟಕ್ಕೆ ಏರುವ ಪ್ರತಿಜ್ಞೆ ಮಾಡೋಣ. ನಾವು ಒಗ್ಗೂಡಿ ಪರಸ್ಪರ ಹೋರಾಡೋಣ, ಒಬ್ಬರಿಗೊಬ್ಬರು ಸಾಥ್ ನೀಡೋಣ. ಆಗ ಮಾತ್ರ ನಮ್ಮ ಮೂಲಭೂತ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ಶಕ್ತಿಗಳನ್ನು ನಾವು ಸೋಲಿಸಬಹುದು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರು ಒತ್ತಾಯಿಸಿದರು.

2019ರಲ್ಲಿ ಜುಲೈ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರಕ್ಕೂ ರಾಜ್ಯಪಾಲ ದಂಖರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆದೇ ಇದೆ. 
 

SCROLL FOR NEXT