ದೇಶ

ಸೆರಂ ಇನ್‌ಸ್ಟಿಟ್ಯೂಟ್ ನಿಂದ ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ: ಪೂನಾವಾಲ

Lingaraj Badiger

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಸಿಇಒ ಅದಾರ್ ಪೂನಾವಾಲಾ ಅವರು ಮಂಗಳವಾರ ಹೇಳಿದ್ದಾರೆ.

ಉದ್ಯಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಪೂನಾವಾಲಾ, ಮಕ್ಕಳ ಲಸಿಕೆ 'ಕೋವೊವ್ಯಾಕ್ಸ್' ಲಸಿಕೆ ಪ್ರಯೋಗ ಹಂತದಲ್ಲಿದೆ ಮತ್ತು ಇದು ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ರಕ್ಷಣೆ ನೀಡುತ್ತದೆ ಎಂದು ಹೇಳಿದರು.

ಪ್ರಸ್ತುತ, ಕೋವಿಶೀಲ್ಡ್ ಮತ್ತು ಇತರ ಕೋವಿಡ್ ಲಸಿಕೆಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಅನುಮೋದಿಸಲಾಗಿದೆ.

"ನಾವು ಮಕ್ಕಳಲ್ಲಿ ಸಾಕಷ್ಟು ತೀವ್ರವಾದ ಕಾಯಿಲೆಗಳನ್ನು ನೋಡಿಲ್ಲ. ಅದೃಷ್ಟವಶಾತ್, ಮಕ್ಕಳಿಗೆ ಕೋವಿಡ್ ಭಯವಿಲ್ಲ. ಆದಾಗ್ಯೂ, ನಾವು ಆರು ತಿಂಗಳಲ್ಲಿ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಯನ್ನು ಪ್ರಾರಂಭಿಸುತ್ತೇವೆ" ಎಂದು ಪೂನಾವಾಲಾ ಹೇಳಿದರು.

ನೀವು ನಿಮ್ಮ ಮಕ್ಕಳಿಗೆ ಲಸಿಕೆ ಹಾಕಬೇಕು. ಇದರಿಂದ ಯಾವುದೇ ಹಾನಿ ಇಲ್ಲ ಎಂದು ನಾನು ಭಾವಿಸುತ್ತೇನೆ, ಈ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ ಮತ್ತು ನಿಮ್ಮ ಮಕ್ಕಳಿಗೆ ಲಸಿಕೆ ಹಾಕಲು ನೀವು ಬಯಸಿದರೆ ಸರ್ಕಾರದ ಅನುಮತಿಗಾಗಿ ಕಾಯಿರಿ ಎಂದರು.

SCROLL FOR NEXT