ದೇಶ

ಗುಜರಾತ್: ಫ್ಲೋರೋ ಕೆಮಿಕಲ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸ್ಫೋಟ; 2 ಸಾವು, 14 ಮಂದಿಗೆ ಗಾಯ

Lingaraj Badiger

ವಡೋದರ: ಗುಜರಾತಿನ ಪಂಚಮಹಲ್ ಜಿಲ್ಲೆಯಲ್ಲಿರುವ ಫ್ಲೋರೋ ಕೆಮಿಕಲ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಗುರುವಾರ ಭಾರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ.

ಗೊಘಂಬಾದ ರಂಜಿತ್‍ನಗರದಲ್ಲಿರುವ ಶೀತಕಗಳ ತಯಾರಿಕಾ ಘಟಕದ ಎಂಪಿಐ-1 ಘಟಕದಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸ್ಫೋಟದ ಸದ್ದು ತಾಲೂಕಿನ ಹಲವು ಕಿಲೋಮೀಟರ್ ದೂರದವರೆಗೂ ಕೇಳಿಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಂಚಮಹಲ್‍ನ ಪೊಲೀಸ್ ಸೂಪರಿಂಟೆಂಡೆಂಟ್ ಲೀನಾ ಪಾಟೀಲ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡವರು ಮತ್ತು ಗಂಭೀರವಾಗಿರುವವರ ಸಂಖ್ಯೆ ಬಗ್ಗೆ ಖಚಿತ ಮಾಹಿತಿ ಇಲ್ಲ. ಕನಿಷ್ಟ 13 ರಿಂದ 14 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಾಲೋಲ್, ಕಲೋಲ್ ಮತ್ತು ಗೋಧ್ರಾದಲ್ಲಿನ ಖಾಸಗಿ ಕಂಪನಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಅಗ್ನಿಶಾಮಕ ದಳದ ಸ್ಥಳಕ್ಕೆ ಧಾವಿಸಿವೆ.

ಐಎನ್‍ಒಎಕ್ಸ್ ಒಡೆತನದ ಜಿಎಫ್‍ಎಲ್ ಕಂಪನಿಯ ರಂಜಿತ್‍ನಗರ ಸಂಕೀರ್ಣಕ್ಕೆ ಸುಮಾರು ಐದು ಕಿಲೋಮೀಟರ್‍ಗಳ ಅಪ್ರೋಚ್ ರಸ್ತೆಗೆ ಪ್ರವೇಶವನ್ನು ಜಿಲ್ಲಾ ಪೊಲೀಸರು ನಿರ್ಬಂಧಿಸಿದ್ದಾರೆ. ಈ ಕಂಪೆನಿಯು ಫ್ಲೋರೋ ಸ್ಪೆಷಾಲಿಟಿಗಳು ಮತ್ತು ಶೀತಕಗಳನ್ನು ತಯಾರಿಸುತ್ತದೆ. ಸ್ಫೋಟಕ್ಕೆ ಸಾಕ್ಷಿಯಾದ ಸ್ಥಾವರವು ಜಿಎಫ್‍ಎಲ್ ನ ಭಾರತದ ಏಕೈಕ ಅತಿದೊಡ್ಡ ಶೀತಕ ಘಟಕವಾಗಿದೆ.

SCROLL FOR NEXT