ದೇಶ

ಅತೀ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ: ವರದಿ

Srinivasamurthy VN

ನವದೆಹಲಿ: ಅತೀ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

ಸ್ಪ್ಯಾಮ್ ಕರೆಗಳಿಂದ ಹೆಚ್ಚು ಪ್ರಭಾವಿತವಾಗಿರುವ 20 ದೇಶಗಳ ಪಟ್ಟಿಯಲ್ಲಿ ಭಾರತವು ಈ ವರ್ಷ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಟ್ರೂ ಕಾಲರ್‍ನ ಹೊಸ ವರದಿಯು ಸ್ಪ್ಯಾಮ್ ಕರೆಗಳು ಮತ್ತು ಜಗತ್ತಿನಾದ್ಯಂತ ಅದರ ಪರಿಣಾಮಗಳ ಕುರಿತು ನಡೆಸಿದ ಅಧ್ಯಯನದಿಂದ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಸ್ಪ್ಯಾಮ್ ಕರೆಗಳ ಪರಿಣಾಮ ಹೆಚ್ಚಾಗಿದೆ ಎಂದು ತೋರಿಸಿದೆ.

2020ರಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಈಗ ಬ್ರೆಜಿಲ್, ಪೆರು ಮತ್ತು ಉಕ್ರೇನ್ ನಂತರದ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ಬಳಕೆದಾರರಿಗೆ ತಿಂಗಳಿಗೆ ಸರಾಸರಿ 32.9 ಸ್ಪ್ಯಾಮ್ ಕರೆಗಳೊಂದಿಗೆ ಬ್ರೆಜಿಲ್ ಅಗ್ರಸ್ಥಾನದಲ್ಲಿದೆ, ಪೆರುವಿನಲ್ಲಿ ಪ್ರತಿ ಬಳಕೆದಾರರಿಗೆ ತಿಂಗಳಿಗೆ 18.02 ಕರೆಗಳಿಗಿಂತ ಹೆಚ್ಚಿನ ಸಂಖ್ಯೆ ಪಡೆದು ಇದು ಎರಡನೇ ಸ್ಥಾನದಲ್ಲಿದೆ.

ಮಾರಾಟ ಮತ್ತು ಟೆಲಿಮಾರ್ಕೆಟಿಂಗ್ ಕರೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಈ ಪಟ್ಟಿಯಲ್ಲಿ ಭಾರತದಲ್ಲಿ ಸ್ಪ್ಯಾಮ್ ಕರೆಗಳಲ್ಲಿ ಏರಿಕೆಯಾಗಿದೆ. ಈ ವರ್ಷ ಎಲ್ಲಾ ವರ್ಗಗಳ ಮಾರಾಟ-ಸಂಬಂಧಿತ ಕರೆಗಳಲ್ಲಿ ಬಹುಪಾಲು ಇನ್ ಕಮಿಂಗ್ ಸ್ಪ್ಯಾಮ್ ಕರೆಗಳೇ(93.5 ಪ್ರತಿಶತ) ಆಗಿವೆ. ಹಣಕಾಸು ಸೇವೆಗಳ ಸ್ಪ್ಯಾಮ್ ಕರೆಗಳು ಶೇಕಡಾ 3.1ರಷ್ಟಿದ್ದರೆ, ಕಿರಿಕಿರಿ ಉಂಟು ಮಾಡುವ ಕರೆಗಳು ಮತ್ತು ಸ್ಕ್ಯಾಮ್ ಕರೆಗಳು ಕ್ರಮವಾಗಿ ಶೇಕಡಾ 2 ಮತ್ತು 1.4 ಶೇಕಡಾ ಇದೆ.

ಈ ವರ್ಷ ಭಾರತದಲ್ಲಿ ಕೇವಲ ಒಬ್ಬ ಸ್ಪ್ಯಾಮರ್‍ನಿಂದ 202 ಮಿಲಿಯನ್ ಸ್ಪ್ಯಾಮ್ ಕರೆಗಳು ಬಂದಿವೆ. ಅದು ಪ್ರತಿದಿನ 6,64,000ಕ್ಕೂ ಹೆಚ್ಚು ಮತ್ತು ಪ್ರತಿದಿನ ಪ್ರತಿ ಗಂಟೆಗೆ 27,000 ಸ್ಪ್ಯಾಮ್ ಕರೆಗಳು ಬಂದಿದೆ ಎಂದು ವರದಿ ಹೇಳುತ್ತದೆ.
 

SCROLL FOR NEXT