ದೇಶ

ಹೆಲಿಕಾಪ್ಟರ್ ದುರಂತ: ರಕ್ಷಣೆ ಮಾಡಲು ಬಂದವರ ಬಳಿ ವರುಣ್ ಸಿಂಗ್ ಉಳಿದವರನ್ನು ರಕ್ಷಿಸಲು, ಪತ್ನಿಗೆ ಕರೆ ಮಾಡಲು ಕೇಳಿದ್ದರು

Srinivas Rao BV

ಬೆಂಗಳೂರು: ತಮಿಳುನಾಡಿನ ಕೂನೂರು ಬಳಿ ಜರಲ್ ಬಿಪಿನ್ ರಾವತ್ ಸೇರಿ 12 ಮಂದಿಯನ್ನು ಬಲಿಪಡೆದಿದ್ದ ಹೆಲಿಕಾಫ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ವರುಣ್ ಸಿಂಗ್ ಹೆಲಿಕಾಫ್ಟರ್ ಪತನಗೊಂಡ ನಂತರವೂ ಪ್ರಜ್ಞಾವಸ್ಥೆಯಲ್ಲಿಯೇ ಇದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಭೋಪಾಲ್ ನಿಂದ ಮಾತನಾಡಿರುವ ವರುಣ್ ಸಿಂಗ್ ಅವರ ತಂದೆ ಕರ್ನಲ್ ಕೆಪಿ ಸಿಂಗ್ (ನಿವೃತ್ತ)  ನನ್ನ ಮಗನಿಗೆ ಶೇ.95 ರಷ್ಟು ಸುಟ್ಟ ಗಾಯಗಳಾಗಿದ್ದವು. ಆದರೆ ಬೆಂಕಿ ಹೊತ್ತಿಸಿಕೊಂಡೇ ಹೆಲಿಕಾಫ್ಟರ್ ನಿಂದ ಹೊರಬಂದ ವರುಣ್ ಸಿಂಗ್ ಅಲ್ಲಿದ್ದ ಸ್ಥಳೀಯರು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ತಮ್ಮ ಗುರುತು ತಿಳಿಸಿದರು. ಅಷ್ಟೇ ಅಲ್ಲದೇ ತಮ್ಮ ಪತ್ನಿ ಗೀತಾಂಜಲಿ ಅವರ ಹೆಸರನ್ನು ಹೇಳಿ ಮೊಬೈಲ್ ನಂಬರ್ ನೀಡಿ ತಾನು ಅಪಾಯದಿಂದ ಪಾರಾಗಿದ್ದೀನಿ ಎಂಬ ಸಂದೇಶ ತಲುಪಿಸಲು ಮನವಿ ಮಾಡಿದ್ದರು. 

"ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರು ಕರೆ ಮಾಡಿ ಗೀತಾಂಜಲಿಗೆ ಮಾಹಿತಿ ನೀಡಿದ್ದಾರೆ. ಆ ದಿನ ನಾನು ಮುಂಬೈ ನಲ್ಲಿದ್ದೆ ಸುದ್ದಿ ನೋಡುತ್ತಿದ್ದ ನಮಗೆ ಪತನಗೊಂಡ ಹೆಲಿಕಾಫ್ಟರ್ ನಲ್ಲಿ ವರುಣ್ ಸಿಂಗ್ ಇದ್ದಾರೆ ಎಂಬ ಮಾಹಿತಿ ತಿಳಿದಿದ್ದು ಫೋನ್ ಬಂದ ಬಳಿಕವಷ್ಟೇ" ಎಂದು ವರುಣ್ ಸಿಂಗ್ ತಂದೆ ನಿವೃತ್ತ ಕರ್ನಲ್ ಕೆಪಿ ಸಿಂಗ್ ವಿವರಿಸಿದ್ದಾರೆ. 

ಹೆಲಿಕಾಫ್ಟರ್ ದುರಂತ ಸಂಭವಿಸಿದ ಬಳಿಕ ವೆಲ್ಲಿಂಗ್ ಟನ್ ನ ಸೇನಾ ಆಸ್ಪತ್ರೆಗೆ ಕರೆದೊಯ್ಯುವವರೆಗೂ ವರುಣ್ ಸಿಂಗ್ ಪ್ರಜ್ಞಾವಸ್ಥೆಯಲ್ಲಿಯೇ ಇದ್ದರು. ಅವರಿಗೆ ನೋವು ಕಡಿಮೆ ಮಾಡಲು ನಿದ್ರಾಜನಕ ಔಷಧವನ್ನು ನೀಡಬೇಕಾಯಿತು, ಪತನದಲ್ಲಿ ಬದುಕಿ ಉಳಿದ ಒಬ್ಬರೇ ಯೋಧ ವರುಣ್ ಸಿಂಗ್ ಆಗಿದ್ದರು. ಹೆಲಿಕಾಫ್ಟರ್ ನಲ್ಲಿ ವರುಣ್ ಸಿಂಗ್ ಇದ್ದರು ಎಂಬ ಮಾಹಿತಿ ಪಡೆಯುತ್ತಿದ್ದಂತೆಯೇ ವೆಲ್ಲಿಂಗ್ ಟನ್ ಗೆ ಧಾವಿಸಿದೆವು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರುಣ್ ಅವರನ್ನು ಹೊರಗಡೆಯಿಂದ ನೋಡಿದೆವು ಎಂದು ತಂದೆ ಕರ್ನಲ್ ಕೆಪಿ ಸಿಂಗ್ ಹೇಳಿದ್ದಾರೆ. 

"ಅವರನ್ನು ಭೂತಕಾಲದಲ್ಲಿಟ್ಟು ಮಾತನಾಡುವುದಕ್ಕೆ ಇಷ್ಟವಾಗುವುದಿಲ್ಲ. ಹಲವಾರು ಮಂದಿಗೆ ಅವರು ಸ್ಪೂರ್ತಿಯಾಗಿದ್ದಾರೆ, ಓರ್ವ ಅತ್ಯದ್ಭುತ ಪುತ್ರ, ಪತಿ, ತಂದೆಯೂ ಹೌದು. ಅವರು ಬಯಸಿದ್ದನ್ನು ಸಂಪಾದಿಸುತ್ತಿದ್ದ ಉತ್ಸಾಹಿ ಹೋರಾಟಗಾರ ಅವರು ವರುಣ್ 17 ವರ್ಷಗಳ ಸೇವಾ ಅವಧಿಯಲ್ಲಿ ಸಾಧಿಸಿದ್ದನ್ನು ಹಲವು ಅಧಿಕಾರಿಗಳಿಗೆ 40 ವರ್ಷಗಳ ಸೇವಾವಧಿಯಲ್ಲೂ ಸಾಧಿಸಲು ಸಾಧ್ಯವಾಗಿಲ್ಲ. ಎಲ್ಲರೂ ವರುಣ್ ಅಂತಹ ಪುತ್ರರನ್ನು ಪಡೆಯಬೇಕು" ಎನ್ನುತ್ತಾರೆ ದುಃಖಿತ ತಂದೆ

ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ವರುಣ್ 

ಶೌರ್ಯ ಚಕ್ರ ಪ್ರಶಸ್ತಿ ಪಡೆದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ವಾಯುಪಡೆ ಸ್ಟೇಷನ್ ನಲ್ಲಿಯೂ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 6 ತಿಂಗಳ ಹಿಂದೆಯಷ್ಟೇ ಅವರನ್ನು ವೆಲ್ಲಿಂಗ್ ಟನ್ ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಅವರನ್ನು ಬೋಧಕರನ್ನಾಗಿ ನೇಮಕ ಮಾಡಲಾಗಿತ್ತು. ವರುಣ್ ಸಿಂಗ್ ಅವರ ಮಕ್ಕಳು ಬೆಂಗಳೂರಿನ ವಾಯುಪಡೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಂದು ವರುಣ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಲಿದೆ. 

SCROLL FOR NEXT