ದೇಶ

ಓಮಿಕ್ರಾನ್ ಪರಿಣಾಮದ ಮೂರನೇ ಅಲೆ ಫೆಬ್ರವರಿಯಲ್ಲಿ ತೀವ್ರ; ಕೇಂದ್ರ ಸಮಿತಿ 

Srinivas Rao BV

ಓಮಿಕ್ರಾನ್ ಪರಿಣಾಮದಿಂದ 2022 ರ ಫೆಬ್ರವರಿ ತಿಂಗಳಲ್ಲಿ ಕೊರೋನಾದ ಮೂರನೇ ಅಲೆ ಉತ್ತುಂಗದಲ್ಲಿರಲಿದೆ ಆದರೆ 2 ನೇ ಅಲೆಗಿಂತಲೂ ತೀವ್ರತೆ ಕಡಿಮೆ ಇರಲಿದೆ ಎಂದು ಕೋವಿಡ್-19 ಸಂಬಂಧಿತ ರಾಷ್ಟ್ರೀಯ ಸೂಪರ್ ಮಾಡಲ್ ಸಮಿತಿ ಎಚ್ಚರಿಸಿದೆ. 

ಭಾರತದಲ್ಲಿ ಸದ್ಯಕ್ಕೆ ದೈನಂದಿನ ಪ್ರಕರಣಗಳ ಸಂಖ್ಯೆ 7,500 ರಷ್ಟಿದೆ. ಡೆಲ್ಟಾ ರೂಪಾಂತರಿಯನ್ನೂ ಮೀರಿ ಓಮಿಕ್ರಾನ್ ರೂಪಾಂತರಿ ಸೋಂಕು ಹರಡಲು ಪ್ರಾರಂಭವಾದರೆ ದೈನಂದಿನ ಪ್ರಕರಣಗಳು ಏರಿಕೆಯಾಗಲಿವೆ ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡಲ್ ಸಮಿತಿ ಹೇಳಿದೆ.

ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್ ಮಾತನಾಡಿ, ಓಮಿಕ್ರಾನ್ ನಿಂದಾಗಿ ಭಾರತ ಮೂರನೇ ಅಲೆ ಎದುರಿಸಲಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕತೆ ಇರುವುದರಿಂದ ತೀವ್ರತೆ ಎರಡನೇ ಅಲೆಗಿಂತಲೂ ಕಡಿಮೆ ಇರಲಿದೆ ಎಂದು ಹೇಳಿದ್ದಾರೆ. 

ಮೂರನೇ ಅಲೆ ಎದುರಾದರೂ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಭಾರತದಲ್ಲಿ ದಿನವೊಂದಕ್ಕೆ 2 ಲಕ್ಷ ಪ್ರಕರಣಗಳಿಗಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಲು ಸಾಧ್ಯವಿಲ್ಲ ಎಂದು ವಿದ್ಯಾಸಾಗರ್ ವಿವರಿಸಿದ್ದರೆ. ದೇಶದಲ್ಲಿ ಕೊರೋನಾ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದ್ದು, ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಜನತೆಗೆ ಕೇಂದ್ರ ಸಮಿತಿ ಕರೆ ನೀಡಿದೆ. 

"ಈ ಅಂಕಿ-ಅಂಶಗಳು ಮನ್ಸೂಚನೆಯಲ್ಲ, ಪ್ರಕ್ಷೇಪಗಳು, ಭಾರತೀಯ ಜನಸಂಖ್ಯೆಯಲ್ಲಿ ವೈರಾಣು ಹೇಗೆ, ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಂಡರೆ ಮುನ್ಸೂಚನೆ ನೀಡಬಹುದು. ಒಂದು ವೇಳೆ ರೋಗನಿರೋಧಕ ಶಕ್ತಿ ಕುಂದಿದರೆ, ದಿನವೊಂದಕ್ಕೆ 1.7-1.8 ಲಕ್ಷದವರೆಗೂ ಮೂರನೇ ಅಲೆಯಲ್ಲಿ ದಿನನಿತ್ಯ ಕೊರೋನಾ ಪ್ರಕರಣಗಳು ವರದಿಯಾಗಬಹುದು, ಇದು ಎರಡನೇ ಅಲೆಯಲ್ಲಿ ದಿನನಿತ್ಯ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲಿ ಅರ್ಧವಷ್ಟೇ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ. 

ಇದೇ ವೇಳೆ ಹೊಸ ವರ್ಷಾಚರಣೆಯನ್ನು ಸರಳವಾಗಿ ಹೆಚ್ಚು ಜನಸೇರದೇ, ಅನಗತ್ಯ ಸಂಚಾರ ತಪ್ಪಿಸಿ ಆಚರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ.
 
ಸೋಂಕು ತಡೆಗೆ ಸಾರ್ವಜನಿಕ ಆರೋಗ್ಯ ಉನ್ನತಿ ಅತ್ಯಗತ್ಯ ವಿಶ್ವಸಂಸ್ಥೆ
ಕೋವಿಡ್-19 ನ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೋಂಕು ತಡೆಗಟ್ಟುವುದಕ್ಕಾಗಿ ಸಾರ್ವಜನಿಕ ಆರೋಗ್ಯ ಉನ್ನತಿ ಹಾಗೂ ಸಾಮಾಜಿಕ ಕ್ರಮಗಳು ಅತ್ಯಗತ್ಯವಾದ ಅಂಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಹೇಳಿದೆ. 

SCROLL FOR NEXT