ದೇಶ

ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರೈತ ನಾಯಕ ರಾಕೇಶ್ ಟಿಕಾಯತ್

Srinivasamurthy VN

ನವದೆಹಲಿ: ನಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಗೆ ಸ್ಪರ್ಧಿಸುವಂತೆ ರಾಕೇಶ್ ಟಿಕಾಯತ್ ಅವರಿಗೆ ಮನವಿ ಮಾಡಿದ್ದರು. ಆದರೆ, ಆ ಮನವಿಯನ್ನು ಟಿಕಾಯತ್ ತಿರಸ್ಕರಿಸಿದ್ದಾರೆ.

ಈ ಸಂಬಂಧ ಉತ್ತರಪ್ರದೇಶದ ಶಾಮ್ಲಿಯಲ್ಲಿ ಮಾತನಾಡಿರುವ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ. ಆದರೆ, ಉತ್ತರಪ್ರದೇಶದಲ್ಲಿ ವಿದ್ಯುತ್ ದರ ಹೆಚ್ಚಳ ಹಾಗೂ ರಾಜ್ಯದ ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುವುದರ ವಿರುದ್ಧ ಮತ್ತೇ ಹೋರಾಡುವುದಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಹಣ ನೀಡುವಂತೆ ನೋಡಿಕೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿಯಾಗಿದೆ. ಹರಿಯಾಣದಲ್ಲಿ ವಿದ್ಯುತ್ ದರ ಎಷ್ಟಿದೆಯೋ ಆ ದರವನ್ನು ಉತ್ತರಪ್ರದೇಶದಲ್ಲೂ ಅಳವಡಿಕೆ ಮಾಡಿಕೊಳ್ಳಬೇಕು. ಶಿಕ್ಷಣ,ನಿರುದ್ಯೋಗ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆಯೂ ದನಿಯೆತ್ತಲಾಗುತ್ತದೆ ಎಂದಿದ್ದಾರೆ.

ಈ ಹಿಂದೆ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಬ್ಯಾನರ್​ನಲ್ಲಿ ನನ್ನ ಫೋಟೋ ಹಾಗೂ ಹೆಸರನ್ನು ಬಳಕೆ ಮಾಡಬಾರದು ಎಂದು ಹೇಳಿದ್ದರು. ಹಾಗೆ ಹೋರಾಟ ಮುಂದುವರೆಸುವುದಾಗಿಯೂ ಎಚ್ಚರಿಸಿದ್ದರು.
 

SCROLL FOR NEXT