ದೇಶ

ಡೆಲ್ಟಾಗಿಂತ ಓಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ: ರಾಜ್ಯಗಳಿಗೆ ಆರೋಗ್ಯ ಸಚಿವಾಲಯ

Srinivas Rao BV

ನವದೆಹಲಿ: ಡೆಲ್ಟಾಗಿಂತ ಓಮಿಕ್ರಾನ್ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. 

ಓಮಿಕ್ರಾನ್ ನಿಂದ ಬಾಧಿತರಾಗುವ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಕೋವಿಡ್-19 ವಾರ್ ರೂಮ್ ಗಳನ್ನು ಪುನಾರಂಭಗೊಳಿಸಲು ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಮಂಗಳವಾರದಂದು ಒಡಿಶಾದಲ್ಲಿಯೂ ಓಮಿಕ್ರಾನ್ ರೂಪಾಂತರಿಯ ಪ್ರಕರಣಗಳು ವರದಿಯಾಗಿದ್ದು, ದೇಶಾದ್ಯಂತ ಒಟ್ಟು ಪ್ರಕರಣಗಳು 202ಕ್ಕೆ ಏರಿಕೆಯಾಗಿದೆ. 

ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ಮುಖ್ಯಕಾರ್ಯದರ್ಶಿಗಳಿಗೂ ಪತ್ರ ಬರೆಯಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ 19 ನಿಂದ ಪೀಡಿತ ಜನಸಂಖ್ಯೆ,  ಭೌಗೋಳಿಕ ಹರಡುವಿಕೆ, ಆಸ್ಪತ್ರೆ ಮೂಲಸೌಕರ್ಯ, ಬಳಕೆ, ಮಾನವಸಂಪನ್ಮೂಲ, ಕಂಟೈನ್ಮೆಂಟ್ ಝೋನ್ ಗಳಿಗೆ  ಸಂಬಂಧಿಸಿದ ಡೇಟಾಗಳ ಪರಿಶೀಲನೆ ನಡೆಯಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ. 

ಒಂದು ವಾರದಲ್ಲಿ ಶೇ.10 ರಷ್ಟು ಪಾಸಿಟಿವಿಟಿ ದರ ಅಥವಾ ಅದಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ದರ ಅಥವಾ ಆಕ್ಸಿಜನ್ ಬೆಂಬಲಿತ, ಐಸಿಯು ಬೆಡ್ ಗಳು ಶೇ.40 ರಷ್ಟು ಭರ್ತಿಯಾಗಿರುವುದು ಅಥವಾ ಅದಕ್ಕಿಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ರಾಜ್ಯಗಳು ಜಿಲ್ಲಾ ಮಟ್ಟದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸೌಲಭ್ಯ ಕಲ್ಪಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಓಮಿಕ್ರಾನ್ ನ್ನು ಆತಂಕದ ರೂಪಾಂತರಿ ಎಂದು ಪರಿಗಣಿಸಲಾಗಿದ್ದು, ಡೆಲ್ಟಾಗಿಂತಲೂ 3 ಪಟ್ಟು ಹೆಚ್ಚು ವೇಗವಾಗಿ ಹರಡಬಲ್ಲದು, ಡೆಲ್ಟಾ ರೂಪಾಂತರಿ ಈಗಲೂ ಹಲವು ಪ್ರದೇಶಗಳಲ್ಲಿ ಹರಡುತ್ತಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. 

SCROLL FOR NEXT