ದೇಶ

ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 358ಕ್ಕೆ ಏರಿಕೆ: 7,051 ಹೊಸ ಕೋವಿಡ್ ಕೇಸು, 374 ಮಂದಿ ಸಾವು

Sumana Upadhyaya

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಶುಕ್ರವಾರ ನೀಡಿರುವ ಅಂಕಿ ಅಂಶದಂತೆ ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 358ಕ್ಕೇರಿದೆ. ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 144 ಹೆಚ್ಚಳವಾಗಿದೆ. 

ಓಮಿಕ್ರಾನ್ ನಿಂದ ಬಾಧಿತರಾಗುವ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಕೋವಿಡ್-19 ವಾರ್ ರೂಮ್ ಗಳನ್ನು ಪುನಾರಂಭಗೊಳಿಸಲು ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. 

ಕರ್ನಾಟಕದಲ್ಲಿ 31 ಪ್ರಕರಣ: ಒಟ್ಟು 358 ಓಮಿಕ್ರಾನ್ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಗಳಲ್ಲಿ ಅತಿ ಹೆಚ್ಚು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ 88 ಮತ್ತು ದೆಹಲಿಯಲ್ಲಿ 67 ಪ್ರಕರಣಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇಲ್ಲಿಯವರೆಗೆ 114 ರೋಗಿಗಳು ಓಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ. ಕರ್ನಾಟಕದಲ್ಲಿ 15 ಮಂದಿ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 

ಕೋವಿಡ್ ಮೂರನೇ ಅಲೆಯ ಈ ಹೊತ್ತಿನಲ್ಲಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 7 ಸಾವಿರದ 051 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಮೊನ್ನೆಗಿಂತ ಸ್ವಲ್ಪ ಕಡಿಮೆಯಾಗಿದೆ. 374 ಮಂದಿ ಕಳೆದ 24 ಗಂಟೆಗಳಲ್ಲಿ ಮೃಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 77 ಸಾವಿರದ 516 ಆಗಿದೆ. 

ಕಳೆದ 24 ಗಂಟೆಗಳಲ್ಲಿ 7 ಸಾವಿರದ 051 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೆ ಒಟ್ಟಾರೆಯಾಗಿ 3 ಕೋಟಿಯ 42 ಲಕ್ಷದ 15 ಸಾವಿರದ 977 ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ಹೊಂದಿದವರ ಪ್ರಮಾಣ ಶೇಕಡಾ 98.40ರಷ್ಟಾಗಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಕಡಿಮೆಯಾಗಿದೆ.

ದೇಶದಲ್ಲಿ ಕೋವಿಡ್ ವೈರಸ್ ನ ವಿರುದ್ಧ ಹೋರಾಡಲು ಲಸಿಕಾ ಅಭಿಯಾನ ಆರಂಭವಾದ ನಂತರ ಇಲ್ಲಿಯವರೆಗೆ 140.31 ಕೋಟಿ ಡೋಸ್ ಲಸಿಕೆ ವಿತರಣೆಯಾಗಿದೆ. ಇದುವರೆಗೆ ದೇಶದಲ್ಲಿ 66 ಕೋಟಿಯ 98 ಲಕ್ಷ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.

SCROLL FOR NEXT