ದೇಶ

ಸನ್ನಿ ಲಿಯೋನ್ ನೃತ್ಯದ ಬಗ್ಗೆ ಮಥುರಾ ಅರ್ಚಕರ ಆಕ್ರೋಶ

Srinivas Rao BV

ಮಥುರಾ: ಸನ್ನಿ ಲಿಯೋನ್ ಅವರ ಇತ್ತೀಚಿನ ವಿಡಿಯೋ ಆಲ್ಬಮ್ ವಿವಾದಕ್ಕೆ ಗುರಿಯಾಗಿದೆ. 

ಪವಿತ್ರ ಕ್ಷೇತ್ರ ಮಥುರಾದ ಅರ್ಚಕರು ಸನ್ನಿ ಲಿಯೋನ್ ನೃತ್ಯದ ಆಲ್ಬಮ್ ಬಗ್ಗೆ ಆಕ್ಷೇಪಗಳನ್ನೆತ್ತಿದ್ದಾರೆ. "ಮಧುಬನ್ ಮೇ ರಾಧಿಕಾ ನಾಚೆ" ಎಂಬ ಹಾಡಿಗೆ ಸನ್ನಿ ಲಿಯೋನ್ ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ್ದಾರೆ ಎಂಬುದು ಅರ್ಚಕರ ಆರೋಪವಾಗಿದೆ. 

ಈ ಹಾಡನ್ನು ಮೂಲತಃ 1960 ರಲ್ಲಿ ಕೊಹಿನೂರ್ ಸಿನಿಮಾಗೆ ಮೊಹಮ್ಮದ್ ರಫಿ ಹಾಡಿದ್ದರು. "ಸನ್ನಿ ಲಿಯೋನ್ ಅವರ ವಿಡಿಯೋ ಆಲ್ಬಮ್ ನ್ನು ನಿಷೇಧಿಸಬೇಕು ಹಾಗೂ ಸರ್ಕಾರ ಆಕೆಯ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೋರ್ಟ್ ಮೊರೆ ಹೋಗುತ್ತೇವೆ" ಎಂದು ಬೃಂದಾವನದ ಸಂತ್ ನವಲ್ ಗಿರಿ ಮಹಾರಾಜ್ ಎಚ್ಚರಿಸಿದ್ದಾರೆ. 

ಆಕೆ ನೃತ್ಯದ ಭಾಗವಿರುವ ವಿಡಿಯೋವನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೋರುವವರೆಗೆ ಭಾರತದಲ್ಲಿರಲು ಆಕೆಗೆ ಅವಕಾಶ ನೀಡಬಾರದು ಎಂದು ಸಂತ್ ನವಲ್ ಗಿರಿ ಮಹಾರಾಜ್ ಆಗ್ರಹಿಸಿದ್ದಾರೆ.

ಅಖಿಲ ಭಾರತೀಯ ತೀರ್ಥ ಪುರೋಹಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಹೇಶ್ ಪಾಠಕ್ ಅವರೂ ಸನ್ನಿ ಲಿಯೋನ್ ನೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವಹೇಳನಕಾರಿ ರೀತಿಯಲ್ಲಿ ನೃತ್ಯ ಮಾಡುವ ಮೂಲಕ  ಬೃಜ್ ಭೂಮಿಯ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಹೇಳಿದ್ದಾರೆ. 

ಸರಿಗಮ ಮ್ಯೂಸಿಕ್ ಬುಧವಾರದಂದು ಮಧುಬನ್ ಎಂಬ ಶೀರ್ಷಿಕೆಯಡಿ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕನಿಕ ಕಪೂರ್ ಹಾಗೂ ಅರಿಂದಮ್ ಚಕ್ರವರ್ತಿ ಹಾಡಿರುವ ಹಾಡಿಗೆ ಸನ್ನಿ ಲಿಯೋನ್ ನೃತ್ಯ ಮಾಡಿದ್ದಾರೆ. 

ಈ ಹಾಡು ಕೃಷ್ಣ ಹಾಗೂ ರಾಧೆಯ ಪ್ರೀತಿಗೆ ಸಂಬಂಧಿಸಿದ್ದಾಗಿದ್ದು, ಸನ್ನಿ ಲಿಯೋನ್ ಇದಕ್ಕೆ ಆಕ್ಷೇಪಾರ್ಹ ರೀತಿಯಲ್ಲಿ (ಲೈಂಗಿಕವಾಗಿ ಆಕರ್ಷಕವಾಗಿರುವ ರೀತಿಯಲ್ಲಿ) ನೃತ್ಯ ಮಾಡಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ನೆಟಿಜನ್ ಗಳೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

SCROLL FOR NEXT