ದೇಶ

ತಮಿಳುನಾಡು: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಒಂದೇ ಕುಟುಂಬದ ಮೂವರು ನೀರು ಪಾಲು

Lingaraj Badiger

ಚೆನ್ನೈ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಚೆಂಗಲ್ಪಟುವಿನ ಪಾಲಾರ್ ನದಿಯಲ್ಲಿ ಒಂದೇ ಕುಟುಂಬದ ಮೂವರು ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ.

ನಾಪತ್ತೆಯಾದವರನ್ನು ತಿರುಸುಲಂನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಲಿಯೋನ್‍ಸಿಂಗ್ ರಾಜಾ(38), ಮಗಳು ಪರ್ಸಿ(16) ಮತ್ತು ಸಹೋದರನ ಮಗ ಲಿವಿಂಗ್‍ಸ್ಟನ್ (19) ಎಂದು ಗುರುತಿಸಲಾಗಿದೆ.

ಚೆಂಗಲ್ಪಟುವಿನ ಪಾಲಾರ್ ನದಿಯ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದರೂ, ಆಚರಪಕ್ಕಂನ ಮಲೈ ಮಾಧಾ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ 20 ಜನರ ಗುಂಪು ಸೆಲ್ಫಿ ಕ್ಲಿಕ್ಕಿಸಲು ನದಿಯ ಬಳಿ ಹೋಗಿದೆ. ಆದರೆ, ಲಿಯೋನ್‍ಸಿಂಗ್ ರಾಜಾ ಮತ್ತು ಮಕ್ಕಳು ನದಿಯ ಆಳಕ್ಕೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪಾಲಾರ್ ಪೋಲೀಸರು ತಿಳಿಸಿದ್ದಾರೆ. ಗುಂಪಿನ ಸದಸ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸಮೀಪದ ಚೆಂಗಲಪಾಟು ಡಿಪೋದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಪ್ರಯತ್ನಿಸಿದರು. ಆದರೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಲಿಯೋನ್‍ಸಿಂಗ್ ರಾಜಾ ಅವರು ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದು, ಏಕಾಏಕಿ ಸಮತೋಲನ ಕಳೆದುಕೊಂಡು ಮೂವರು ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರೀ ಪ್ರಮಾಣದ ನೀರಿನ ಹರಿವು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವ ಕಾರಣ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ ಎಂದು ಚೆಂಗಲ್ಪಟುವಿನ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. 

ಚೆನ್ನೈನ ಮುಳುಗು ತಜ್ಞರು ಮತ್ತು ಸ್ಥಳೀಯರು ಮೃತದೇಹಗಳನ್ನು ಹೊರತೆಗೆಯಲು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

SCROLL FOR NEXT