ದೇಶ

ರಾಜಸ್ಥಾನ: ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ ಕತ್ತೆಗಳ ಕಳುವು ಪ್ರಕರಣ! 

Srinivas Rao BV

ಜೈಪುರ: ರಾಜಸ್ಥಾನದ ಹನುಮಾನ್‌ಗಢ ಪೊಲೀಸರಿಗೆ ಕತ್ತೆಗಳ ಕಳುವು ಪ್ರಕರಣ ತಲೆನೋವಾಗಿ ಪರಿಣಮಿಸಿದೆ.
 
ಎಂಥೆಂತಹ ಸುಳಿವೇ ಇಲ್ಲದ ಅಪ್ರಾಧ ಪ್ರಕರಣಗಳನ್ನು ಪತ್ತೆ ಮಾಡುವ ಪೊಲೀಸರಿಗೆ ಕೇವಲ ಕತ್ತೆಗಳ ಕಳುವು ಪ್ರಕರಣ ತಲೆನೋವಾಗಿದೆಯೇ ಎಂದು ಹುಬ್ಬೇರಿಸಬೇಡಿ. ಕಳೆದುಹೋಗಿರುವ ಕತ್ತೆಗಳನ್ನು ಹುಡುಕಿಕೊಡದೇ ಇದ್ದರೆ ಪೊಲೀಸ್ ಠಾಣೆ ಎದುರಲ್ಲೇ ಪ್ರತಿಭಟನೆ ನಡೆಸುವುದಾಗಿ ಜಿಲ್ಲೆಯ ಗ್ರಾಮಸ್ಥರು ಒತ್ತಡ ಹಾಕುತ್ತಿದ್ದಾರೆ. 

ಆಗಿದ್ದಿಷ್ಟು. ಈ ಜಿಲ್ಲೆಯ ಕಾಲುವೆ ಪ್ರದೇಶದಲ್ಲಿರುವ ಗ್ರಾಮಗಳ ಮಂದಿ ಸರಕುಗಳ ಸಾಗಣೆ, ಮಣ್ಣು ಹೊರುವುದಕ್ಕಾಗಿ ಕತ್ತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಿದ್ದರು. ಅವುಗಳ ಕೆಲಸ ಮುಕ್ತಾಯವಾದ ನಂತರ ಬಯಲು ಪ್ರದೇಶಗಳಲ್ಲಿಯೇ ಮೇಯಲು ಬಿಡುತ್ತಿದ್ದರು. 

ಕೆಲವು ದಿನಗಳ ಹಿಂದೆ ಕತ್ತೆಗಳು ಕಾಣೆಯಾಗಿದ್ದವು. ಕತ್ತೆಗಳ ಮಾಲಿಕರಿಗೆ ಯಾರೋ ಒಂದಷ್ಟು ಮಂದಿ ಪೊಲೀಸ್ ಸಹಾಯ ಪಡೆದು ಕತ್ತೆಗಳನ್ನು ಹುಡುಕುವಂತೆ ಸಲಹೆ ನೀಡಿದ್ದಾರೆ. ಆಗಿನಿಂದಲೂ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. 

ಕಳೆದ ಕೆಲವು ದಿನಗಳಿಂದ 40 ಕ್ಕೂ ಹೆಚ್ಚು ಕತ್ತೆಗಳು ನಾಪತ್ತೆಯಾಗಿದ್ದು, ಮಾಲಿಕರು ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದರು. ಪ್ರಾರಂಭದಲ್ಲಿ ಪೊಲೀಸರು ಇದನ್ನು ನಿರ್ಲಕ್ಷಿಸಿದ್ದರು ಆದರೆ ಸ್ಥಳೀಯ ಸಿಪಿಐ(ಎಂ) ಕಾರ್ಯಕರ್ತರು ಹಾಗೂ ಕತ್ತೆಗಳ ಮಾಲಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರ ಪರಿಣಾಮವಾಗಿ ಪೊಲೀಸರಿಗೆ ಕಳುವಾಗಿದ್ದ ಕತ್ತೆಗಳನ್ನು ಹುಡುಕಲೇಬೇಕಾದ ಅನಿವಾರ್ಯತೆ ಎದುರಾಯಿತು. ಪರಿಣಾಮ ಹೇಗೋ 15 ಕತ್ತೆಗಳನ್ನು ಹುಡುಕಿ ಪೊಲೀಸ್ ಠಾಣೆಗೆ ಕರೆತಂದರೆ ಅದ್ಯಾವುದೂ ಮಾಲಿಕರ ಕೂಗಿಗೆ ಕಿವಿಗೊಡಲೇ ಇಲ್ಲ. ಈ ಕತ್ತೆಗಳು ನಮ್ಮವೇ ಆಗಿದ್ದರೆ ಅವುಗಳಿಗೆ ಇಡಲಾಗಿದ್ದ ಹೆಸರನ್ನು ಕೂಗಿದ ತಕ್ಷಣ ಸ್ಪಂದಿಸಬೇಕಿತ್ತು ಇವು ನಮ್ಮ ಕತ್ತೆಗಳಲ್ಲ, ನಮ್ಮ ಕತ್ತೆಗಳು ಮಾತ್ರ ನಮ್ಮ ಕೆಲಸಗಳಿಗೆ ಪಳಗಿದ್ದವು ಬೇರೆ ಕತ್ತೆಗಳನ್ನು ಉಪಯೋಗಿಸುವುದಕ್ಕೆ ಆಗುವುದಿಲ್ಲ" ಎಂದು ಮಾಲಿಕರು ತಗಾದೆ ತೆಗೆದಿದ್ದಾರೆ. 

ಯಾವುದೇ ಗುರುತುಗಳಿಲ್ಲದೇ ಕತ್ತೆಗಳನ್ನು ಹುಡುಕುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಠಾಣಾಧಿಕಾರಿ ವಿಜಯೇಂದ್ರ ಶರ್ಮ ಆದರೆ ನಮಗೆ ಬೇರೆ ಕಥೆಗಳಲ್ಲೆಲ್ಲಾ ಬೇಡ ನಮಗೆ ನಮ್ಮದೇ ಕತ್ತೆಗಳು ಬೇಕೆಂದು ಮಾಲಿಕರು ಪಟ್ಟು ಬಿಡದೇ ಪೊಲೀಸರನ್ನು ಕಾಡುತ್ತಿದ್ದಾರೆ. 

ಚುನಾವಣೆ ಸನಿಹದಲ್ಲೇ ಇರುವುದರಿಂದ ರಾಜಕೀಯ ನಾಯಕರೂ ಕತ್ತೆ ಮಾಲಿಕರಿಗೇ ಬೆಂಬಲವಾಗಿ ನಿಂತಿದ್ದು ಪೊಲೀಸರಿಗೆ ಇದು ಪೀಕಲಾಟಕ್ಕೆ ಬಂದಿರುವುದರಿಂದ 302, 307, ಎನ್ ಡಿಪಿಎಸ್ ಸೇರಿದಂತೆ ಗಂಭೀರ ಪ್ರಕರಣಗಳನ್ನೂ ಬದಿಗಿರಿಸಿ ಕತ್ತೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಇದಕ್ಕಾಗಿ 4-5 ಸದಸ್ಯರನ್ನೊಳಗೊಂಡ ತಂಡವನ್ನೂ ರಚಿಸಲಾಗಿದೆ. ಕತ್ತೆ ಮಾಲಿಕರು ಹಾಗೂ ಸಿಪಿಐ(ಎಂ) ಕಾರ್ಯಕರ್ತರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದು ಹುಡುಕಿಕೊಡದೇ ಇದ್ದಲ್ಲಿ ಪ್ರತಿಭಟನೆ ಪ್ರಾರಂಭಿಸುವುದಾಗಿ ಎಚ್ಚರಿಸಿದ್ದಾರೆ.

SCROLL FOR NEXT