ದೇಶ

ರೈತರ ಪ್ರತಿಭಟನೆ ವಿರುದ್ಧ ಟ್ವೀಟ್ ಮಾಡುವಂತೆ ಸೆಲೆಬ್ರಿಟಿಗಳಿಗೆ ಬಿಜೆಪಿ ಒತ್ತಡ ಹಾಕಿದ್ದರೆ ಮಹಾ ಸರ್ಕಾರದಿಂದ ತನಿಖೆ

Lingaraj Badiger

ಮುಂಬೈ: ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳು ಮಾಡಿದ ಟ್ವೀಟ್‌ಗಳ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಗುಪ್ತಚರ ಇಲಾಖೆಗೆ ಆದೇಶ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ ಅವರು ಸೋಮವಾರ ತಿಳಿಸಿದ್ದಾರೆ.

ಕೇಂದ್ರದ ಆಡಳಿತರೂಢ ಬಿಜೆಪಿ ರಾಷ್ಟ್ರೀಯ ಹೀರೋಗಳನ್ನು ಬೆದರಿಸುತ್ತಿದೆ ಎಂದು ಸಚಿನ್ ಸಾವಂತ್ ಅವರು ಆರೋಪಿಸಿದ್ದಾರೆ.

"ರೈತರ ವಿಚಾರದ ಬಗ್ಗೆ ರಿಹಾನಾ ಟ್ವೀಟ್ ಮಾಡಿದ ನಂತರ ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ಬಂದಿತು. ನಂತರ ಸೆಲೆಬ್ರಿಟಿಗಳ ಸರಣಿ ಟ್ವೀಟ್‌ಗಳನ್ನು ಮಾಡಿದರು. ಒಬ್ಬ ಸೆಲೆಬ್ರಿಟಿ ಸ್ವತಃ ತಾನೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ ಉತ್ತಮ. ಆದರೆ ಸೆಲೆಬ್ರಿಟಿಗಳ ಒಂದೇ ರೀತಿಯ ಸರಣಿ ಟ್ವೀಟ್ ಅನುಮಾನಕ್ಕೆ ಕಾರಣವಾಗಿದ್ದು, ಇದರ ಹಿಂದೆ ಬಿಜೆಪಿ ಕೈವಾಡ ಇದೆ' ಎಂದಿದ್ದಾರೆ.

ಒಂದು ವೇಳೆ ಬಿಜೆಪಿ ಸೆಲೆಬ್ರಿಟಿಗಳನ್ನು ಬೆದರಿಸುತ್ತಿದ್ದರೆ ಅವರಿಗೆ ಭದ್ರತೆ ಒದಗಿಸಬೇಕು. ಈ ಸಂಬಂಧ ನಾನು ಗೃಹ ಸಚಿವ ಅನಿಲ್ ದೇಶಮುಖ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಇದು ಗಂಭೀರ ವಿಚಾರ. ಈ ಬಗ್ಗೆ ತನಿಖೆ ನಡೆಸಲು ಗುಪ್ತಚರ ಇಲಾಖೆಗೆ ಆದೇಶ ನೀಡಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

SCROLL FOR NEXT